
ದೂರದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಒಂದು ಮನೆಯೊಳಗೆ NEET ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕಾಗಿ ಒಂದು ಪುಟ್ಟ ಬಾಲಕಿಯ ಕೊಲೆಯಾಗಿದೆ. ಅಲ್ಲಿ ಅಪ್ಪನ ಕೈಯಿಂದ ಬಿದ್ದ ಬಡಿಗೆಯ ಏಟಿಗೆ ಪ್ರಾಣಬಿಟ್ಟ 17ರ ಮಗು ಸಾಧನಾಳ ಚೀತ್ಕಾರ ಇನ್ನೂ ಮಾರ್ದನಿಸುತ್ತಿರುವ ಹಾಗೆ ಭಾಸವಾಗುತ್ತಿದೆ. ಇಡೀ ದಿನದ ಕೆಲಸ, ಸ್ನೇಹಿತರ ಹರಟೆ ಎಲ್ಲದರ ನಡುವೆ ಈ ಸುದ್ದಿ ಮನಸ್ಸಿನ ಮೂಲೆಯಲ್ಲೆಲ್ಲೋ ಚುಚ್ಚುತ್ತಲೇ ಇದೆ.
ನಾವು ಕಟ್ಟುವ ಒಂದೊಂದು ‘ನಾಳೆ’ಗಳೂ ಎಂತಹ ಭಯಾನಕ ರೂಪ ತಾಳಬಹುದು ಅಲ್ಲವೇ? ಪೋಷಕರ ಪಾಲಿಗೆ ಮಕ್ಕಳೆಂದರೆ ಅವರ ಬದುಕಿನ ಮುಂದುವರಿದ ಅಧ್ಯಾಯ, ತಮ್ಮ ಕನಸುಗಳ ವಿಸ್ತರಣೆ. ಮಗು ಹುಟ್ಟಿದ ಕ್ಷಣದಿಂದಲೇ, ಅದರ ಪುಟ್ಟ ಬೆರಳು ಹಿಡಿದು ನಡೆಸುವಾಗ, ತೊದಲು ನುಡಿ ಕೇಳುವಾಗ, ಮೊದಲ ಬಾರಿ ಅಪ್ಪ-ಅಮ್ಮ ಎಂದು ಕರೆದಾಗ, ಅವರ ಕಣ್ಣಲ್ಲಿ ಸಾವಿರ ಕನಸುಗಳು ಚಿಗುರೊಡೆಯುತ್ತವೆ. “ನನ್ನ ಮಗ ಡಾಕ್ಟರ್ ಆಗ್ಬೇಕು, ನನ್ನ ಮಗಳು ಇಂಜಿನಿಯರ್ ಆಗ್ಬೇಕು, ಇಡೀ ಜಗತ್ತೇ ಅವರನ್ನು ನೋಡಬೇಕು,” ಎಂಬ ಆಸೆಗಳು ಆ ಪುಟ್ಟ ಜೀವದ ಸುತ್ತ ಹೆಣೆಯಲಾರಂಭಿಸುತ್ತವೆ. ಈ ಕನಸುಗಳಲ್ಲಿ ಪ್ರೀತಿಯಿದೆ, ಕಾಳಜಿಯಿದೆ, ತಮ್ಮ ಮಗುವಿನ ಭವಿಷ್ಯದ ಬಗೆಗಿನ ಭರವಸೆಯಿದೆ. ಆದರೆ, ಈ ಪ್ರೀತಿಯೇ ವಿಷವಾಗಿ, ಕನಸುಗಳೇ ಕಗ್ಗೊಲೆಯಾಗಿ ಬದಲಾದಾಗ?

ಸಾಧನಾಳ ತಂದೆ ಧೊಂಡಿರಾಮ್ ಭೋಸ್ಲೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವನೊಬ್ಬ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ! ಸಾವಿರಾರು ಮಕ್ಕಳಿಗೆ ವಿದ್ಯೆ ಕಲಿಸಿ, ದಾರಿ ತೋರಬೇಕಾದ ಗುರುವಿನ ಸ್ಥಾನದಲ್ಲಿದ್ದವನು. ಆದರೆ ತಮ್ಮದೇ ಮಗಳ ವಿಷಯಕ್ಕೆ ಬಂದಾಗ, ಅವನೊಳಗಿನ ಗುರು ಸತ್ತು, ಓರ್ವ ಕ್ರೂರಿ ಎದ್ದು ನಿಂತಿದ್ದ. NEET ಎಂಬ ನಾಲಕಕ್ಷರದ ಪರೀಕ್ಷೆಯೊಂದು, ಅಪ್ಪ-ಮಗಳ ನಡುವಿನ ಪ್ರೀತಿಯ ಕೊಂಡಿಯನ್ನೇ ಕೊಂದು ಹಾಕಿತು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೇ ಮಹಾಪರಾಧ ಎಂಬಂತೆ, ಮಗಳನ್ನು ಮೃಗದಂತೆ ಥಳಿಸಿ ಸಾವಿನ ದವಡೆಗೆ ತಳ್ಳಿದ ಆ ಕ್ಷಣದಲ್ಲಿ, ಅವರು ಕೊಂದಿದ್ದು ಸಾಧನಾಳನ್ನು ಮಾತ್ರವಲ್ಲ, ಪಿತೃತ್ವವನ್ನೂ, ನಂಬಿಕೆಯನ್ನೂ, ಮತ್ತು ಓರ್ವ ವಿದ್ಯಾರ್ಥಿ ತನ್ನ ಶಿಕ್ಷಕನಲ್ಲಿ ಕಾಣುವ ಭರವಸೆಯನ್ನೂ ಕೂಡ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿ 13,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ, ಪ್ರತೀ ಗಂಟೆಗೆ ಒಬ್ಬ ವಿದ್ಯಾರ್ಥಿ ತನ್ನ ಬದುಕನ್ನು ಕೊನೆಗೊಳಿಸುತ್ತಿದ್ದಾನೆ. ಇದರಲ್ಲಿ ಬಹುತೇಕ ಸಾವುಗಳಿಗೆ ಕಾರಣ ಪರೀಕ್ಷೆಯ ಒತ್ತಡ ಮತ್ತು ವೈಫಲ್ಯದ ಭಯ. ಈ ಅಂಕಿಅಂಶಗಳು ಕೇವಲ ನಂಬರ್‌ಗಳಲ್ಲ, ಇವು ನಮ್ಮ ವ್ಯವಸ್ಥೆಯ ಮುಖಕ್ಕೆ ಹಿಡಿದ ಕೈಗನ್ನಡಿ. ಲಕ್ಷಾಂತರ ಮಕ್ಕಳು ತಮ್ಮ ಇಷ್ಟಗಳನ್ನು ಬದಿಗೊತ್ತಿ, ಪೋಷಕರ ಕನಸುಗಳನ್ನು ಬೆನ್ನತ್ತಿ, ಕೋಚಿಂಗ್ ಸೆಂಟರ್‌ಗಳೆಂಬ ಒತ್ತಡದ ಕುಕ್ಕರ್‌ಗಳಲ್ಲಿ ಬೆಂದು ಹೋಗುತ್ತಿದ್ದಾರೆ.

ಪೋಷಕರೇ, ಒಂದು ಕ್ಷಣ ಯೋಚಿಸಿ. ನಿಮ್ಮ ಮಗು ರಾತ್ರಿ ನಿದ್ದೆಯಲ್ಲೂ ಪರೀಕ್ಷೆಯದ್ದೇ ಕನಸು ಕಾಣುತ್ತಿದೆಯೇ? ಊಟದ ತಟ್ಟೆಯ ಮುಂದೆಯೂ ಪುಸ್ತಕ ಹಿಡಿದು ಕೂರುತ್ತದೆಯೇ? ಸ್ನೇಹಿತರೊಡನೆ ನಗುವುದನ್ನು ಮರೆತು, ಕೋಣೆಯೊಳಗೆ ಒಬ್ಬಂಟಿಯಾಗಿರುತ್ತದೆಯೇ? ಕಡಿಮೆ ಅಂಕ ಬಂದಾಗ ನಿಮ್ಮ ಕಣ್ಣನ್ನು ನೋಡಲು ಹೆದರುತ್ತದೆಯೇ? ಹಾಗಿದ್ದರೆ, ನೀವು ಅವರಿಗೆ ಯಶಸ್ಸಿನ ದಾರಿ ತೋರಿಸುತ್ತಿಲ್ಲ, ಬದಲಿಗೆ ಅವರನ್ನು ಸಾವಿನಂಚಿಗೆ ತಳ್ಳುತ್ತಿದ್ದೀರಿ ಎಂದೇ ಅರ್ಥ.
ಮಕ್ಕಳು ನಮ್ಮ ಕನಸುಗಳನ್ನು ಹೊರುವ ಕತ್ತೆಗಳಲ್ಲ. ಅವರು ತಮ್ಮದೇ ಆದ ಕನಸುಗಳನ್ನು ಕಾಣಬೇಕಾದ ಸ್ವತಂತ್ರ ಜೀವಿಗಳು. ಅವರಿಗೆ ಮಾರ್ಕ್ಸ, ರ್‍ಯಾಂಕುಗಳಿಗಿಂತ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ಪ್ರೀತಿ, ನಿಮ್ಮ ಬೆಂಬಲ ಮತ್ತು “ಪರವಾಗಿಲ್ಲ, ಸೋತರೆ ನಾನಿದ್ದೇನೆ” ಎಂಬ ಭರವಸೆಯ ಒಂದು ಅಪ್ಪುಗೆ. ವೈದ್ಯಕೀಯ, ಇಂಜಿನಿಯರಿಂಗ್ ಬಿಟ್ಟರೆ ಬದುಕೇ ಇಲ್ಲ ಎಂಬ ಭ್ರಮೆಯಿಂದ ಹೊರಬನ್ನಿ.. ಬದುಕು ಕಟ್ಟಿಕೊಳ್ಳಲು ಸಾವಿರ ದಾರಿಗಳಿವೆ.

ಒಂದು ಪರೀಕ್ಷೆಯಲ್ಲಿನ ವೈಫಲ್ಯ, ಬದುಕಿನ ವೈಫಲ್ಯವಲ್ಲ. ಅದೊಂದು ಪಾಠವಷ್ಟೇ. ಈ ಸತ್ಯವನ್ನು ನಾವು ಮಕ್ಕಳಿಗೆ ಹೇಳಿಕೊಡುವ ಮೊದಲು, ನಾವೇ ಅರ್ಥಮಾಡಿಕೊಳ್ಳಬೇಕಿದೆ. ನಾಳೆ ನಮ್ಮ ಮಗು ದೊಡ್ಡ ಡಾಕ್ಟರ್ ಆಗಿ, ನಮ್ಮನ್ನು ಮರೆತು ಬದುಕುವುದಕ್ಕಿಂತ, ಇವತ್ತು ನಮ್ಮ ಜೊತೆ ಸಂತೋಷವಾಗಿ, ನೆಮ್ಮದಿಯಾಗಿ ಬದುಕುವುದು ಮುಖ್ಯವಲ್ಲವೇ?
ನಮ್ಮ ಮನೆಗಳಲ್ಲಿ ಅಂಕಪಟ್ಟಿಗಿಂತ ಮನುಷ್ಯತ್ವಕ್ಕೆ, ರ್‍ಯಾಂಕಿಗಿಂತ ಸಂಬಂಧಗಳಿಗೆ ಬೆಲೆ ಸಿಗಲಿ. ಮಕ್ಕಳ ಕೈಗೆ ಪುಸ್ತಕ ಕೊಡಿ, ಆದರೆ ಅವರ ಮನಸ್ಸಿನ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆದಿಡಿ. ಅವರಿಗೆ ಯಶಸ್ಸಿನ ಶಿಖರವೇರುವ ದಾರಿ ತೋರಿಸಿ, ಆದರೆ ದಾರಿಯಲ್ಲಿ ಎಡವಿದರೆ ಹಿಡಿದು ಮೇಲೆತ್ತಲು ನಿಮ್ಮ ಕೈಗಳನ್ನು ಸಿದ್ಧವಾಗಿಡಿ. ನಾಳೆಯ ಬಗ್ಗೆ ಯೋಚಿಸಿ, ಆದರೆ ಆ ‘ನಾಳೆ’ಯನ್ನು ಕಟ್ಟುವ ಭರದಲ್ಲಿ ಇವತ್ತಿನ ‘ಇಂದಿನ’ ಸುಂದರ ಬದುಕನ್ನು ಬಲಿ ಕೊಡಬೇಡಿ. ಪ್ರತಿ ಮಗುವೂ ಒಂದು ಅರಳುವ ಹೂವು. ಅದಕ್ಕೆ ಪ್ರೀತಿಯ ನೀರೆರೆಯಿರಿ, ಒತ್ತಡದ ವಿಷ ಸುರಿಯಬೇಡಿ.

- ವರದಿ : ಸಿದ್ದು ಮಠಪತಿ, ( ಕೃಪೆ )