ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಗ್ರಸ್ಥಾನಿ ಗಳಾಗಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೈ ಸೇರುವುದು ಈ ವರ್ಷ ವಿಳಂಬವಾಗಲಿದೆ. ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ದಿನದಿಂದಲೇ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಗ್ರಸ್ಥಾನಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿತ್ತು. ಆದರೆ ಈ ವರ್ಷ ಖರೀದಿ ಆರಂಭವಾಗಿಲ್ಲ.
ತಡವಾಗಬಹುದು, ಆದರೆ ನೀಡದೆ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಪಪಡಿಸಿದೆ. ರಾಜ್ಯಕ್ಕೆ ಅಗ್ರಸ್ಥಾನಿಗಳ ಸಹಿತ ಜಿಲ್ಲಾಮಟ್ಟದಲ್ಲಿ ಮೂವರು ಮತ್ತು ತಾಲೂಕು ಮಟ್ಟದಲ್ಲಿ ಮೂವರು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮೊದಲ ಸ್ಥಾನದಲ್ಲಿ ಮೂರ್ನಾಲ್ಕು ವಿದ್ಯಾರ್ಥಿಗಳಿದ್ದರೆ ಎಲ್ಲರಿಗೂ ಕೊಡಲಾಗುತ್ತದೆ. ಈ ಬಾರಿ 625 ಅಂಕ ಪಡೆದ 6 ಮಂದಿಗೂ ಲ್ಯಾಪ್‌ಟಾಪ್ ನೀಡಲಾಗುತ್ತದೆ.
ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೂ ಇದೇ ಮಾನದಂಡ ಅನುಸರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಲಕ್ಷ ರೂಪಾಯಿ ನಗದು
ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ರುವ ಪ. ಜಾತಿ ಮತ್ತು ಪ. ಪಂಗಡದ ವಿದ್ಯಾರ್ಥಿಗಳಿಗೆ ಸರಕಾರವು ತಲಾ 1 ಲಕ್ಷ ರೂ. ನಗದು ಬಹುಮಾನ ನೀಡಲಿದೆ. ಇದನ್ನು ಎರಡೂ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನೀಡಲಾಗುತ್ತದೆ. ಪ. ಜಾತಿ ಅಥವಾ ಪ. ಪಂಗಡದ ವಿದ್ಯಾರ್ಥಿಗಳೇ ಅಗ್ರಸ್ಥಾನದಲ್ಲಿದ್ದಲ್ಲಿ, ನಗದು ಹಣ ಮತ್ತು ಲ್ಯಾಪ್‌ಟಾಪ್ ಎರಡೂ ಸಿಗಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ 34 ಶೈಕ್ಷಣಿಕ ಜಿಲ್ಲೆ, 240 ತಾಲೂಕುಗಳ ಅಗ್ರ ಮೂವರಿಗೆ ಲ್ಯಾಪ್‌ಟಾಪ್ ನೀಡಲಾಗುತ್ತದೆ. ಪೂರ್ಣಾಂಕ ಪಡೆದ 6, 624 ಅಂಕ ಪಡೆದ 11 ಮಂದಿ ಹಾಗೂ 623 ಅಂಕ ಗಳಿಸಿದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಲ್ಯಾಪ್‌ಟಾಪ್ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
– ವಿ. ಸುಮಂಗಳಾ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ
ರಾಜು ಖಾರ್ವಿ ಕೊಡೇರಿ