ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ತಮ್ಮ ಸರ್ಕಾರವು ಮದ್ಯ ನಿಷೇಧದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದು, ರಾಜ್ಯವು “ಉತ್ತಮ ರಾಜ್ಯ” ವಾಗಲು ಮದ್ಯ ಸೇವಿಸುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸುವ ಅಭಿಯಾನವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಹೇಳಿದ್ದಾರೆ.
“ಮಧ್ಯಪ್ರದೇಶವನ್ನು ಮದ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ಬಯಸಿದ್ದೇವೆ. ಮದ್ಯ ಸೇವಿಸಲು ಜನರಿದ್ದರೆ ಮದ್ಯ ಸರಬರಾಜು ಆಗುತ್ತಲೇ ಇರುತ್ತದೆ ಆದ್ದರಿಂದ ಕೇವಲ ಮದ್ಯ ನಿಷೇಧ ಮಾಡುವುದು ಮಾತ್ರ ನಮ್ಮ ಕೆಲಸವಲ್ಲ. ಮದ್ಯ ಮುಕ್ತ ಅಭಿಯಾನವನ್ನು ನಡೆಸಿ, ಜನರು ಮದ್ಯ ಸೇವಿಸುವುದನ್ನು ನಿಲ್ಲಿಸುವಂತೆ ಮಾಡುತ್ತೇವೆ. ಇದರಿಂದಾಗಿ ನಾವು ಉತ್ತಮ ರಾಜ್ಯವಾಗುತ್ತೇವೆ, ಇದಕ್ಕಾಗಿ ನಿರ್ಣಯವನ್ನು ತೆಗೆದುಕೊಳ್ಳಬೇಕು ” ಎಂದು ಶಿವರಾಜ್ ಚೌಹಾಣ್ ರ್‍ಯಾಲಿಯೊಂದರಲ್ಲಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕಾಟ್ನಿ ಜಿಲ್ಲೆಯ ಪ್ರತಿ ಹಳ್ಳಿಯ ಮನೆಗೂ ಟ್ಯಾಪ್‌ಗಳ ಮೂಲಕ ಶುದ್ಧ ಕುಡಿಯುವ ನೀರು ಸಿಗುತ್ತದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲು ಹಣವನ್ನು ನೀಡಲಾಗುವುದು. ಸುಮಾರು 3,25,000 ಆಯುಷ್ಮಾನ್ ಕಾರ್ಡ್‌ಗಳನ್ನು ಅಗತ್ಯವಿರುವವರಿಗೆ ನೀಡಲಾಗುತ್ತದೆ. ಹೆಣ್ಣುಮಕ್ಕಳ ಮೇಲೆ ದುಷ್ಕೃತ್ಯ ಎಸಗಿದರೆ ಮರಣದಂಡನೆ ಘೋಷಿಸಿದ ಮೊದಲ ಸರ್ಕಾರ ಮಧ್ಯಪ್ರದೇಶವಾಗಿದೆ ಎಂದು ಚೌಹಾಣ್ ಹೇಳಿದ್ದಾರೆ.
ಅವರು ಕಾಟ್ನಿ ಜಿಲ್ಲೆಯ ನಗರ ಪ್ರದೇಶಗಳಿಗೆ ಪಂಚವಾರ್ಷಿಕ ಕ್ರಿಯಾ ಯೋಜನೆಯ ಪ್ರಸ್ತುತಪಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಬಿಜೆಪಿ ಮುಖಂಡರು ಕೂಡಾ ಭಾಗವಹಿಸಿದ್ದರು.