ಶಿರಸಿ: ನಕಲಿ ಪಾಸ್‌ಪೋರ್ಟ್ ತಯಾರಿಸಿದ ಆರೋಪದಡಿಯಲ್ಲಿ ಮೂವರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹುಲೇಕಲ್ ಗ್ರಾಮದ ಹಂಚರಟ್ಟಾದ ಅಬ್ದುಲ್ ರೆಹಮಾನ್ (22) ವಿದೇಶಕ್ಕೆ ತೆರಳಲು ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಈ ಮೊದಲು ಪಾಸ್‌ಪೋರ್ಟ್ ಹೊಂದಿದ್ದ ಈತನಿಗೆ ಇಸಿಎನ್‌ಆರ್ ಪಾಸ್‌ಪೋರ್ಟ್ ಸಿಗದ ಕಾರಣಕ್ಕೆ, ನಕಲಿ ಆದಾಯ ಪ್ರಮಾಣ ಪತ್ರ ನೀಡಿ ಮತ್ತೆ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಧಿಕಾರಿಗಳು ತಪಾಸಣೆ ನಡೆಸಿದ್ದ ವೇಳೆ, ಪಾಸ್‌ಪೋರ್ಟ್ ನಕಲಿ ಎಂಬುದು ದೃಢಪಟ್ಟಿತ್ತು. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದರು.
ತನಿಖೆ ವೇಳೆ ಆರೋಪಿಯು ಹುಬ್ಬಳ್ಳಿಯ ಶ್ರೀಲಕ್ಷ್ಮಿ ಮತ್ತು ಆಳಂದದ ನಿಯಾಜ್ ಅಹಮದ್ ಎಂಬವರಿಂದ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾಗಿ ತಿಳಿಸಿದ್ದ. ಅದರಂತೆ ಇಬ್ಬರನ್ನೂ ಬಂಧಿಸಲಾಯಿತು ಎಂದು ಶಿರಸಿ ಗ್ರಾಮೀಣ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ ತಿಳಿಸಿದ್ದಾರೆ.