ಮುಂಬಯಿ: ಸಚಿನ್ ತೆಂಡುಲ್ಕರ್ ಅವರಿಗೆ ಕಾರುಗಳ ಕ್ರೇಜ್ ವಿಪರೀತ.
ಮಾರುತಿಯಿಂದ ಮೊದಲ್ಗೊಂಡು ಫೆರಾರಿ, ನಿಸ್ಸಾನ್ ಜಿಟಿ-ಆರ್‌ನಂತಹ ಬೃಹತ್ ಕಾರುಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ.
ಕೆಲವು ಪ್ರಶಸ್ತಿ ರೂಪದಲ್ಲಿ ಬಂದರೆ, ಇನ್ನು ಕೆಲವನ್ನು ಪ್ರಾಯೋಜಕರು ನೀಡಿದ್ದಾರೆ. ಉಳಿದುದನ್ನು ಅವರೇ ಖರೀದಿಸಿದ್ದಾರೆ.
ಸಚಿನ್ ತೆಂಡುಲ್ಕರ್ ಅವರ ಮೊದಲ ಕಾರು ಎಂಬ ಹೆಗ್ಗಳಿಕೆ ‘ಮಾರುತಿ-800’ಗೆ ಸಲ್ಲುತ್ತದೆ. ಇದನ್ನು ಅವರು ತಮ್ಮದೇ ಸಂಪಾದನೆಯಿಂದ ಖರೀದಿಸಿದ್ದರು.
ಹೀಗಾಗಿ ಅವರು ಮಾರುತಿ-800 ಮೇಲೆ ವಿಪರೀತ ಮೋಹದ ಜತೆಗೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ನೋವಿನ ಸಂಗತಿಯೆಂದರೆ, ಆ ಕಾರು ಈಗ ಅವರ ಬಳಿ ಇಲ್ಲದಿರುವುದು.
ದಯವಿಟ್ಟು ಇದನ್ನು ತನಗೆ ಮರಳಿಸಿ ಎಂದು ತೆಂಡುಲ್ಕರ್ ‘ಇನ್ ದ ನ್ಪೋರ್ಟ್ ಲೈಟ್’ ಕಾರ್ಯಕ್ರಮದಲ್ಲಿ ವಿನಂತಿಸಿಕೊಂಡಿದ್ದಾರೆ!
ಮಾರುತಿ-800 ನನ್ನ ಮೊದಲ ಕಾರು. ಆದರೆ ಅದೀಗ ನನ್ನ ಬಳಿ ಇಲ್ಲ. ಇದನ್ನು ಮರಳಿ ಪಡೆಯಬೇಕೆಂಬುದು ನನ್ನ ಬಯಕೆ.
ಈ ಕಾರಿನೊಂದಿಗೆ ನಾನು ಭಾವನಾತ್ಮಕ ನಂಟನ್ನು ಹೊಂದಿದ್ದೇನೆ. ಈ ಕಾರ್ಯಕ್ರಮ ನೋಡುತ್ತಿರುವವರು ದಯವಿಟ್ಟು ಈ ಕಾರಿನ ಬಗ್ಗೆ ಮಾಹಿತಿ ನೀಡಬಹುದೆಂದು ನಂಬಿದ್ದೇನೆ’ ಎಂದು ತೆಂಡುಲ್ಕರ್ ಹೇಳಿದ್ದಾರೆ.
ಆದರೆ ಆ ಮಾರುತಿ-800 ಕಾರು ಎಲ್ಲಿಗೆ ಹೋಯಿತು ಎಂಬ ಬಗ್ಗೆ ತೆಂಡುಲ್ಕರ್ ಯಾವುದೇ ಮಾಹಿತಿ ನೀಡಿಲ್ಲ.
ಕಾರುಗಳ ಹುಚ್ಚು
ಈ ಕಾರ್ಯಕ್ರಮದ ವೇಳೆ ಸಚಿನ್ ತೆಂಡುಲ್ಕರ್ ತಮ್ಮ ಕಾರುಗಳ ಕ್ರೇಜ್ ಕುರಿತೂ ಹೇಳಿಕೊಂಡರು. ‘ನಮ್ಮ ಮನೆಯ ಪಕ್ಕದಲ್ಲೇ ಓಪನ್ ಡ್ರೈವ್-ಇನ್ ಮೂವೀ ಹಾಲ್ ಒಂದಿತ್ತು. ಅಲ್ಲಿಗೆ ಜನರು ತರೇವಾರಿ ಕಾರುಗಳಲ್ಲಿ ಬಂದು ಸಿನೆಮಾ ನೋಡುತ್ತಿದ್ದರು. ಪಾರ್ಕ್ ಮಾಡಿದ ಈ ಕಾರುಗಳು ನನ್ನನ್ನು ವಿಪರೀತ ಸೆಳೆಯುತ್ತಿದ್ದವು. ಅಣ್ಣನೊಂದಿಗೆ ಬಾಲ್ಕನಿ ಮೇಲೆ ಗಂಟೆಗಟ್ಟಲೆ ನಿಂತು ಈ ಕಾರುಗಳನ್ನೇ ವೀಕ್ಷಿಸುತ್ತಿದ್ದೆ…’ ಎಂಬುದಾಗಿ ಸಚಿನ್ ತಮ್ಮ ಕಾರು ಪ್ರೀತಿಯನ್ನು ಬಣ್ಣಿಸಿದರು.