ಬೆಂಗಳೂರು, ಆ.16- ಕಳೆದ ವರ್ಷ ಅತಿವೃಷ್ಟಿಯಿಂದ ನಲುಗಿದ ಸಂತ್ರಸ್ಥರ ಬದುಕು, ಹಾಳಾದ ರಸ್ತೆ, ಕುಸಿದ ಮನೆಗಳು ಬಿಜೆಪಿ ಸರ್ಕಾರದ ಒಂದು ವರ್ಷದ ಸಂಭ್ರಮಾಚರಣೆಯನ್ನು ಅಣಕಿಸುವಂತಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸಿದ್ದರಾಮಯ್ಯ ಅವರು, ನಾವು ಹೇಳಿದರೆ ರಾಜಕೀಯ ಎಂದು ಅಲ್ಲಗಳೆಯುತ್ತಿರಾ. ಪತ್ರಿಕೆಗಳ ವರದಿಗಳನ್ನಾದರೂ ಒಪ್ಪಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದ ನಲುಗಿಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತುಹೋಗಿದೆ. ಸಂತ್ರಸ್ತರ ಗೋಳನ್ನು ಅವರ ಬಾಯಿಯಿಂದಲೇ ಕೇಳಿ, ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ, ಪುಣ್ಯ ಕಟ್ಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದಾದ ನಷ್ಟಕ್ಕೆ ಪರಿಹಾರ ಕೇಳಿದ್ದು ರೂ.35,160 ಕೋಟಿ, ಕೇಂದ್ರ ಸರ್ಕಾರ ಕೊಟ್ಟಿದ್ದು 1869 ಕೋಟಿ ರೂ. ಮತ್ತೆ ಈ ವರ್ಷ ನೆರೆ ಬಂದಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಶೆಡ್‍ಗಳಲ್ಲಿ ನರಳುತ್ತಿರುವ ಸಂತ್ರಸ್ತರು, ಕುಸಿದ ಮನೆಗಳು, ಹಾಳಾದ ರಸ್ತೆಗಳು, ಮುರಿದ ಸೇತುವೆಗಳು. ಎಲ್ಲವೂ ಬಿಜೆಪಿ ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತಿವೆ. ಕಣ್ಣು ಬಿಟ್ಟು ನೋಡಿ. ಕಳೆದ ವರ್ಷದ ಸಂಕಟಗಳು ಈಗಲೂ ಹಾಗೇ ಇವೆ ಎಂದು ತಿರುಗೇಟು ನೀಡಿದ್ದಾರೆ.