ಬೆಂಗಳೂರು : ಮದ್ಯ ಸೇವಿಸಲು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಪತ್ನಿ ತಲೆ ಮೇಲೆ ಸೀಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ ಮಾಡಿ ಪತಿ ಪರಾರಿಯಾಗಿದ್ದಾನೆ. ಹೆಣ್ಣೂರಿನಲ್ಲಿ ಶೆಡ್ನಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕೆ ಮಲ್ಲಿಕಮ್ಮ ಮೃತರು. ಆರೋಪಿ ವೀರೇಶ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಲಕ್ಷ್ಮೀಪುರ ಮೂಲದ ಮಲ್ಲಿಕಮ್ಮ ಅವರ ಮೊದಲ ಪತಿ ಮೃತಪಟ್ಟಿದ್ದ. ಆನಂತರ ಕೂಲಿ ಅರಸಿ ಬೆಂಗಳೂರಿಗೆ ಬಂದಿದ್ದ ಆಕೆ, ವೀರೇಶ್ ಎಂಬುವನ ಜೊತೆ ಮದುವೆಯಾಗಿ ಹೆಣ್ಣೂರಿನ ಶೆಡ್ನಲ್ಲಿ ನೆಲೆಸಿದ್ದಳು. ವೀರೇಶ್ಗೆ ಕುಡಿತದ ಚಟವಿದ್ದು, ಮದ್ಯ ಸೇವನೆಗೆ ಹಣ ಕೊಡುವಂತೆ ಪದೇ ಪದೇ ಮಲ್ಲಿಕಮ್ಮ ಜೊತೆ ಜಗಳ ಮಾಡುತ್ತಿದ್ದ. ಕೂಲಿ ಮಾಡಿದ ಹಣವನ್ನು ಕುಡಿದು ಹಾಳು ಮಾಡುತ್ತಾನೆ ಎಂಬ ಕಾರಣಕ್ಕೆ ಆಕೆ ಹಣ ನೀಡಲು ನಿರಾಕರಿಸುತ್ತಿದ್ದಳು ಎನ್ನಲಾಗಿದೆ.
ಜೂನ್ 10 ರಂದು ಇದೇ ರೀತಿ ಹಣ ಕೇಳಿದ್ದಕ್ಕೆ ನಿರಾಕರಿಸಿದಳು ಎಂಬ ಕೋಪಕ್ಕೆ ಶೆಡ್ನಲ್ಲಿ ಮಲ್ಲಿಕಮ್ಮನ ತಲೆಯ ಮೇಲೆ ಸೀಮೆಂಟ್ ಇಟ್ಟಿಗೆಯನ್ನು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪತಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಮಹಿಳೆಯ ಸಂಬಂಧಿಯನ್ನು ಕರೆ ಮಾಡಿ ವಿಚಾರಿಸಿದಾಗ ಮಾಹಿತಿ ಲಭ್ಯವಾಗಿದೆ. ಹಣದ ವಿಚಾರಕ್ಕೆ ವೀರೇಶ್ ಕೊಲೆ ಮಾಡಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತನ ಬಂಧನಕ್ಕೆ ಬಲೆಬೀಸಿದ್ದು, ಹೆಣ್ಣೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News