Breaking News

ಇಂದು ವಿಶ್ವ ಜಲ ದಿನ : ರಕ್ಷಿಸಿ ಜಲ-ಸಂರಕ್ಷಿಸಿ ಜೀವ ಸಂಕುಲ

ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರವಿಲ್ಲದೆ ಹಲವಾರು ದಿನ ಗಳು ಬದುಕಬಹುದು. ಆದರೆ, ಕುಡಿಯುವ ನೀರಿಲ್ಲದೆ ಒಂದು ದಿನ ಬದುಕುವುದೂ ಅತೀ ಕಷ್ಟದ ಮಾತು. ತಿನ್ನಲು ಆಹಾರವಿಲ್ಲದಿದ್ದರೂ ಸಹ ಕುಡಿಯುವ ನೀರು ನಮ್ಮ ಜೀವವನ್ನು ಹಲವು ದಿನಗಳ ಕಾಲ ಉಳಿಸುವ ಸಂಜೀವಿನಿಯೇ ಸರಿ. ಈ ಸತ್ಯ ಸಂಗತಿಯಿಂದಾಗಿಯೇ, ಪ್ರತೀ ಜೀವ ಸಂಕುಲಕ್ಕೆ ನೀರು ಎಂಬುದು ಪ್ರಕೃತಿ ನೀಡಿರುವ ಜೀವಹನಿ, ಅಮೃತ.

ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22ನ್ನು ವಿಶ್ವ ಜಲ ದಿನವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಜಲ ದಿನವನ್ನು ಪ್ರತಿ ದಿನ ಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದಂತೂ ಸತ್ಯ.

ಭೂಮಿಯ ಶೇ.70ಕ್ಕೂ ಹೆಚ್ಚು ಭಾಗವನ್ನು ಆವರಿಸಿರುವ ನೀರಿನಲ್ಲಿ ಕುಡಿಯಲು ಹಾಗೂ ದಿನ ಬಳಕೆಗೆ ಯೋಗ್ಯವಾಗಿರುವುದು (ಸಿಹಿ ನೀರು) ಕೇವಲ ಶೇ.2ರಿಂದ 3ರಷ್ಟು ಮಾತ್ರ ಎಂಬುದು ಅಚ್ಚರಿಯ ಸಂಗತಿ. ಈ ಯೋಗ್ಯ ನೀರಿನಲ್ಲಿ ಶೇ.1ರಷ್ಟು ಧ್ರುವ ಪ್ರದೇಶಗಳ ಹಿಮ ಮತ್ತು ನೀರ್ಗಲ್ಲುಗಳ ರೂಪದಲ್ಲಿ ಅಡಗಿ ಕುಳಿತಿದೆ.

ಉಳಿದ ಭಾಗ ಕೆರೆ, ನದಿ, ಹಳ್ಳ-ಕೊಳ್ಳ, ಸರೋವರಗಳಲ್ಲಿ ಲಭ್ಯವಿದೆ. ಭೂಮಿಯ ಮೇಲೆ ಅತಿ ಹೆಚ್ಚು ನೀರು ಸಮುದ್ರ ಮತ್ತು ಸಾಗರಗಳಲ್ಲಿ ಇದೆಯಾದರೂ ಅದು ಮಾನವರಿಗೆ ಕುಡಿಯಲು ಹಾಗೂ ದೈನಂದಿನ ಬಳಕೆಗೆ ಸ್ವಲ್ಪವೂ ಯೋಗ್ಯವಾಗಿಲ್ಲ.

ಈ ನೀರು ಅತಿ ಹೆಚ್ಚು ಉಪ್ಪಿನ ಹಾಗೂ ವಿವಿಧ ರಾಸಾಯನಿಕ ಲವಣಾಂಶಗಳಿಂದ ಕೂಡಿದೆ. ಮನುಷ್ಯ ಹಾಗೂ ಪ್ರಾಣಿಗಳು ನೇರವಾಗಿ ಈ ನೀರು ಕುಡಿದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಾವಿಗೂ ಕಾರಣವಾಗುತ್ತದೆ ಎಂಬುದು ಈಗಾಗಲೇ ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ.

ಹೆಚ್ಚಿನ ಜನರಿಗೆ ಈ ವಿಷಯ ತಿಳಿದಿದೆಯಾದರೂ ಲಭ್ಯವಿರುವ ಅಲ್ಪ ಸ್ವಲ್ಪ ಯೋಗ್ಯ ನೀರನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಹಾಗೂ ಸಂರಕ್ಷಣೆ ಮಾಡುವಲ್ಲಿ ಜನರಿಗೆÉ ಆಸಕ್ತಿ ಇಲ್ಲದಂತೆ ಕಂಡುಬರುತ್ತಿರುವುದು ವಿಷಾದನೀಯ.

ಮನುಷ್ಯನ ಅತಿಯಾದ ದುರಾಸೆಯಿಂದಾಗಿ ತೀವ್ರಗತಿಯ ಅರಣ್ಯ ನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ, ಪರಿಸರದ ಮೇಲೆ ತೋರುತ್ತಿರುವ ಕ್ರೌರ್ಯದಿಂದಾಗಿ ಪ್ರತೀ ಕ್ಷಣ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತ ಸಾಗಿದೆ. ಇದರಿಂದಾಗಿ ಭೂಮಿ ಮೇಲಿನ ತಾಪಮಾನ ದಿನೇ ದಿನೇ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ.

ಗಿಡ-ಮರಗಳ ಸಂತತಿ ಕ್ಷೀಣವಾಗಿ ಇಡೀ ಭೂಮಿ ಬಂಜರು ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಆತಂಕಕಾರಿ ಅಂಶ ಬಯಲಾಗಿದೆ.
ಇದು ತಿಳಿದಿದ್ದರೂ ಕೂಡ ಅದೆಷ್ಟೋ ವಿದ್ಯಾವಂತ ಹಾಗೂ ಅವಿದ್ಯಾವಂತ ಜನರು ಮೂರ್ಖರಂತೆ ವರ್ತಿಸುತ್ತಿದ್ದಾರೆ.

ಇದರೊಂದಿಗೆ, ನಡೆಯುತ್ತಿರುವ ನಗರೀಕರಣ, ವೈಭವೋಪೇತ ಜೀವನ ಶೈಲಿ, ಭೂಮಿತಾಯಿಯ ಒಡಲು ಸೀಳುತ್ತಿರುವ ಗಣಿಗಾರಿಕೆ ಸಾವಿರಾರು ಗಿಡ-ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಿ ಹಸಿರು ನಾಶವಾಗುತ್ತಿದೆ. ಇದರಿಂದಾಗಿ ಪ್ರತೀ ವರ್ಷ ಬಿಸಿಲಿನ ತಾಪ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ.

ಗಿಡ-ಮರಗಳು ನೆರಳನ್ನು ನೀಡುವುದರೊಂದಿಗೆ, ಮಳೆ ಮೋಡಗಳನ್ನು ಒಂದೆಡೆ ತಡೆದು ಸಾಕಷ್ಟು ಮಳೆ ಸುರಿಸುತ್ತವೆ. ಇದರಿಂದಾಗಿ, ಕೆರೆ-ಕಟ್ಟೆಗಳು, ನದಿ-ಸರೋವರಗಳು ತುಂಬಿ ತುಳುಕುವುದರೊಂದಿಗೆ ಅಂತರ್ಜಲ ಹೆಚ್ಚಾಗಿ ಭೂಮಿಯನ್ನು ಸದಾಕಾಲ ತಂಪಾಗಿರುವಂತೆ ಹಾಗೂ ಪ್ರಾಣಿ, ಪಕ್ಷಿ, ಜನ-ಜಾನುವಾರುಗಳು ನೆಮ್ಮದಿಯಿಂದ ಜೀವನ ನೆಡೆಸುವಂತೆ ಮಾಡುತ್ತವೆ.

ಇಂದಿನವರೆಗೂ, ಮನುಜಕುಲ ಪ್ರಕೃತಿಯಲ್ಲಿ ಹಾಗೂ ಭೂತಾಯಿಯ ಒಡಲಲ್ಲಿ ದೊರೆಯುತ್ತಿರುವ ಜಲಸಂಪನ್ಮೂಲದ ಮೇಲೆ ಸರಿಪಡಿಸಲಾಗದಷ್ಟು ಕ್ರೌರ್ಯ ಮೆರೆದಿದೆ. ಈ ಅನಾಚಾರವೆಲ್ಲವನ್ನು ಈ ಕ್ಷಣದಿಂದಲೇ ಸಂಪೂರ್ಣವಾಗಿ ನಿಲ್ಲಿಸಿ, ಪ್ರತಿಯೊಬ್ಬರೂ ಗಂಭೀರತೆಯಿಂದ, ಜವಾಬ್ದಾರಿಯಿಂದ ವರ್ತಿಸದಿದ್ದರೆ, ಕೆಲವೇ ದಿನಗಳಲ್ಲಿ ನೀರಿನ ಬೆಲೆ ಪೆಟ್ರೋಲ್, ಡೀಸೆಲ್ ಬೆಲೆಗೆ ಸಮವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಒಂದೊಮ್ಮೆ ಪೆಟ್ರೋಲ್, ಡೀಸೆಲ್ ಸಿಕ್ಕರೂ ಸಿಗಬಹುದು. ಆದರೆ, ಜೀವ ಉಳಿಸಿಕೊಳ್ಳಲು ಯೋಗ್ಯವಾದ ನೀರು ಸಿಗುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ತಾತ ಮುತ್ತಾತಂದಿರ ಕಾಲಘಟ್ಟದಲ್ಲಿ ಸಮೃದ್ಧ ಮಳೆಯಿಂದ ದೇಶದ ಪ್ರತಿ ಹಳ್ಳಿಗಳಲ್ಲಿನ ಕೆರೆ-ಕಟ್ಟೆಗಳು, ಜರಿ ತೊರೆಗಳು ತುಂಬಿ ತುಳುಕುತ್ತಿದ್ದವು.

ಅವುಗಳು ಹರಿಯುವ ಕಡೆಗಳೆಲ್ಲ ಹಚ್ಚ ಹಸಿರು ಮೇಳೈಸುತ್ತಿದ್ದವು. ಆ ಪ್ರಕೃತಿ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು. ಪೂರ್ವಜನ್ಮದ ಪುಣ್ಯದಂತೆ ಭಾಸವಾಗುತ್ತಿತ್ತು. ಅಂದಿನ ದಿನಗಳಲ್ಲಿ ಮಳೆಗಾಲ ತಿಂಗಳುಗಟ್ಟಲೇ ಇರುತ್ತಿತ್ತು. ಆ ಮಳೆಯಲ್ಲಿ ಹಸಿರನ್ನುಟ್ಟ ಧರೆಯ ಸೊಬಗನ್ನು, ಮೋಡಗಳನ್ನು ಬಾಚಿ ತಬ್ಬಿದ ಬೆಟ್ಟ-ಗುಡ್ಡಗಳ ಸಾಲುಗಳನ್ನು ನೋಡುವುದೇ ಅದೃಷ್ಟವಾಗಿತ್ತು.

ಆದರೆ, ಇಂದು ಅತೀ ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಮನುಷ್ಯ ತನ್ನ ವಿಪರೀತ ಲಾಲಸೆ, ದುರಾಸೆಗಳನ್ನು ಈಡೇರಿಸಿಕೊಳ್ಳಲು ಹೆತ್ತ ತಾಯಿಗೆ ಸಮಾನಾದ ಭೂಮಿ ತಾಯಿಯ ಮೇಲೆ, ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾನೆ. ಈ ಪರಿಣಾಮ ಎತ್ತ ನೋಡಿದರೂ ನೀರಿಲ್ಲದೆ ಭಣಗುಟ್ಟುವ ಹಳ್ಳ, ತೊರೆ, ಕೆರೆ, ನದಿ, ಸರೋವರಗಳು ಮತ್ತು ನೀರಿಗಾಗಿ ಪರಿತಪಿಸುತ್ತಿರುವ ಜನ, ಮೂಕ ಪ್ರಾಣಿ-ಪಕ್ಷಿಗಳು ಮುಂಬರುವ ಭೀಭತ್ಸ, ಭಯಂಕರ ದಿನಗಳನ್ನು ಕಣ್ಮುಂದೆ ತರಿಸುತ್ತಿವೆ.

ಲಭ್ಯವಿರುವ ಅತ್ಯಲ್ಪ ಜೀವಜಲವನ್ನು ಸುರಕ್ಷಿತವಾಗಿ ಸಂರಕ್ಷಿಸುವುದರ ಜತೆಗೆ ಮುಂಬರುವ ದಿನಗಳಲ್ಲಿ ಸಮೃದ್ಧ ಮಳೆಯಾಗಲು ಹಾಗೂ ಭೂಮಿ ಸದಾಕಾಲ ತಂಪಾಗಿರುವಂತೆ ಮಾಡಲು ಏನಾದರೂ ಅಳಿದುಳಿದ ಮಾರ್ಗವಿದೆಯೇ ಎಂದು ಕೇಳುವ(ಮಾನವೀಯತೆಯುಳ್ಳ)ವರಿಗೆ ಕೆಲವೊಂದು ಮಾರ್ಗೋಪಾಯಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

#ಸಾರ್ವಜನಿಕರಲ್ಲಿ ನೀರಿನ ಅಗತ್ಯ, ಮಹತ್ವ ಹಾಗೂ ನೀರಿನ ಪೋಲು ಮತ್ತು ಮಾಲಿನ್ಯದಿಂದುಂಟಾಗುವ ಸಮಸ್ಯೆಗಳ ಬಗ್ಗೆ ಸೂಕ್ತ ಉದಾಹರಣೆ ಕೊಟ್ಟು ಅರಿವು ಮೂಡಿಸುವುದು. #ಇನ್ನು ಮುಂದಾದರೂ ಅಳಿದುಳಿದಿರುವ ಅಲ್ಪ ಸ್ವಲ್ಪ ಗಿಡ-ಮರಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪೋಷಿಸಿ ರಕ್ಷಿಸುವುದು.ಇದರಿಂದ ಹಸಿರುಯುತ ಪರಿಸರ ಹಾಗೂ ಅರಣ್ಯ ಹೆಚ್ಚಾಗಿ ಉತ್ತಮ ಮಳೆಯಾಗುವುದಲ್ಲದೆ, ಉಸಿರಾಡಲು ಶುದ್ಧ ಆಮ್ಲಜನಕ ದೊರಕುತ್ತದೆ.

#ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ವಿಷಯುಕ್ತ ರಾಸಾಯನಿಕ ಪದಾರ್ಥಗಳು ನೀರಿನ ಮೂಲಗಳಿಗೆ ಸೇರದಂತೆ ಕಠಿಣ ಕಾನೂನು ರೂಪಿಸಿ ಜಾರಿಗೆ ಬರುವಂತೆ ಮಾಡುವುದು.

#ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತೀ ಮನೆಗಳಲ್ಲಿ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಲ್ಲಿ ಖಡಾಖಂಡಿತವಾಗಿ ಮಳೆ ಕೊಯ್ಲು ಪದ್ಧತಿಯನ್ನು ತುರ್ತಾಗಿ ಅಳವಡಿಸಿ ಕೊಳ್ಳುವಂತೆ ಅಗತ್ಯ ಅರಿವು ಮೂಡಿಸು ವುದು, ಆದೇಶ ಜಾರಿಗೆ ತರುವುದು.

#ನೀರನ್ನು ಮಲಿನ ಮಾಡುವ ಹಾಗೂ ನೀರಿಗೆ ವಿಷಯುಕ್ತ ಪದಾರ್ಥಗಳನ್ನು ಬೆರೆಸುವುವರ ವಿರುದ್ಧ ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಂತೆ ಕಠಿಣ ಕಾನೂನು ಕ್ರಮ ಜರುಗಿಸುವುದು. ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸುವತ್ತ ಆಸಕ್ತಿ ತೋರುವುದು.

#ಭೂಮಾಲಿನ್ಯ, ವಾಯುಮಾಲಿನ್ಯ ತಡೆಗೆ ವಾಹನಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ತಂತ್ರಜಾ್ಞನ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.

#ಮನೆಗಳಲ್ಲಿ ವಿವಿಧ ಕೆಲಸ-ಕಾರ್ಯಗಳಿಗೆ ಅಗತ್ಯವಿರುವ ಕನಿಷ್ಟ ನೀರಿನ ಬಳಕೆ ಹಾಗೂ ನೀರಿನ ಮರುಪೂರಣ ವ್ಯವಸ್ಥೆ ಬಗ್ಗೆ ಜಾಹೀರಾತುಗಳು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು.

#ಕೊಳಾಯಿಗಳಲ್ಲಿ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ನೀರಿನ ಅನಗತ್ಯ ಪೋಲನ್ನು ತಡೆಯುವಲ್ಲಿ ತುರ್ತು ಗಮನ ಹರಿಸುವುದು.

#ಮಳೆಗಾಲದಲ್ಲಿ ಹರಿಯುವ ನೀರನ್ನು ಓಡುವಂತೆ, ಓಡುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ ಮಾಡುವುದು. ಇದರಿಂದ ಅಂತರ್ಜಲದ ಮಟ್ಟ ಅಧಿಕವಾಗಿ ವರ್ಷ ಪೂರ್ತಿ ಜೀವಜಲ ಸಮೃದ್ಧವಾಗಿ ದೊರಕುವುದರಲ್ಲಿ ಸಂಶಯವಿಲ್ಲ.

#ಪ್ರಮುಖವಾಗಿ ಕೆರೆ-ಕಟ್ಟೆಗಳ ಅಭಿವೃದ್ಧಿಯೊಂದಿಗೆ, ಮಳೆಗಾಲದ ಸಂದರ್ಭದಲ್ಲಿ ಅವುಗಳ ಒಡಲಲ್ಲಿ ಸಂಪೂರ್ಣ ನೀರು ತುಂಬಿಸಲು ಆಡಳಿತಶಾಹಿಗಳು, ಸರ್ಕಾರಗಳು, ಜನ ನಾಯಕರುಗಳು, ಅಧಿಕಾರಿ ವರ್ಗದವರು ಸೂಕ್ತ ಕ್ರಮಗಳನ್ನು ಸಮಾರೋಪಾದಿಯಲ್ಲಿ ಕೈಗೊಳ್ಳುವುದು.

ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಶತಸಿದ್ಧ ಎಂಬುದನ್ನು ಎಲ್ಲರೂ ನೆನಪಿಡಿ. ಅಮೃತ ಸಮಾನವಾದ ನೀರನ್ನು ನಾವು ಮಾತ್ರವಲ್ಲದೆ, ನಮ್ಮ ಮುಂದಿನ ಜನಾಂಗಕ್ಕೂ ಕೂಡ ಜತನದಿಂದ ಉಳಿಸೋಣ. ನೀರಿಗಾಗಿ ಪ್ರಪಂಚದ ಮೂರನೆ ಮಹಾಯುದ್ಧವಾಗುವುದು ಖಂಡಿತ ಬೇಡವೇ ಬೇಡ. ಹೌದಲ್ಲವೇ?

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.