ಜನಸಾಮಾನ್ಯರು ಕಡಿಮೆ ದರದಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಏಪ್ರಿಲ್ 30 ರಿಂದ ರಾಜ್ಯಾದ್ಯಂತ ಉಚಿತ ಮರಳು ನೀತಿ ಜಾರಿಗೆ ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಕಲಬುರಗಿಯಲ್ಲಿ ಪ್ರಕಟಿಸಿದ್ದಾರೆ.
ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ವಿತರಣೆ ಮಾಡಬೇಕೆಂಬುದು ಸರ್ಕಾರದ ಪ್ರಮುಖ ಉದ್ದೇಶ ಹೀಗಾಗಿ ಇದೇ 30ರಿಂದ ಅನ್ವಯವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರುತ್ತಿದ್ದೇವೆ. ಜೊತೆಗೆ ಮರಳು ಅಕ್ರಮ ತಡೆಗಟ್ಟುವ ಉದ್ದೇಶದಿಂದ ಉಚಿತ ಮರಳು ನೀತಿ ಜೊತೆಗೆ ನೂತನ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ.
ಕಲಬುರಗಿಯಲ್ಲಿ ಸಚಿವರಾದ ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಟಿ ನಡೆಸಿ ಉಚಿತ ಮರಳು ನೀತಿ ಮತ್ತು ನೂತನ ಮರಳು ನೀತಿ ಜಾರಿ ಕುರಿತು ತಿಳಿಸಿದ್ದಾರೆ.
ಜನಸಾಮಾನ್ಯರ ಹತ್ತು ಲಕ್ಷ ರೂಪಾಯಿಯೊಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು ವಿತರಣೆ ಮಾಡಲಿದ್ದೇವೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದರು. ಹಳ್ಳಕೊಳ್ಳ, ಚೆಕ್‍ಡ್ಯಾಂ, ಝರಿಗಳಲ್ಲಿ ಉಚಿತವವಾಗಿ ಮರಳು ತೆಗೆದು ಎತ್ತಿನ ಗಾಡಿ ಮೂಲಕ ಸಾಗಾಣಿಕಗೆ ಅವಕಾಶ ನೀಡಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಏ.30ರೊಳಗೆ ಹೊಸ ಮರಳು ನೀತಿಯನ್ನು ಜಾರಿ ಮಾಡಲಾಗುತ್ತಿದ್ದು, ಈಗಾಗಲೇ ಮರಳು ನೀತಿ ಸಿದ್ದವಾಗಿದೆ. ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಲಿದೆ. ಬೇರೆ ರಾಜ್ಯಗಳು ಕೂಡ ಕರ್ನಾಟಕ ಮಾದರಿಯನ್ನು ಅನುಸರಿಸಲಿದ್ದಾರೆ’ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.