ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಡ್ರಗ್ಸ್ ಕುರಿತು ಚಾಟ್ ನಡೆದಿದೆ ಎನ್ನಲಾದ
ವಾಟ್ಸ್ಆಪ್ ಗುಂಪಿಗೆ ಅವರೇ ಅಡ್ಮಿನ್ ಆಗಿದ್ದರು ಎಂದು ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಶುಕ್ರವಾರ ಎನ್ಸಿಬಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ದೀಪಿಕಾ ವಿಚಾರಣೆ ನಡೆಯಲಿದ್ದು, ಅಧಿಕಾರಿಗಳು ಈ ಕುರಿತು ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ.
ವಾಟ್ಸ್ಆಪ್ ಚಾಟ್ ಗ್ರೂಪ್ನಲ್ಲಿ ಜಯಾ ಸಹಾ, ಕರಿಷ್ಮಾ ಮತ್ತು ದೀಪಿಕಾ ಮೂವರಷ್ಟೆ ಸದಸ್ಯರಾಗಿದ್ದರು. ಡ್ರಗ್ಸ್ ವಿಚಾರವಾಗಿ ಈ ಗುಂಪಿನಲ್ಲಿ 2017ರಲ್ಲಿ ಚಾಟ್ ನಡೆದಿತ್ತು ಎನ್ನಲಾಗಿದೆ. 2017ರ ಚಾಟ್ಗಳನ್ನು ರಿಟ್ರೀವ್ ಮಾಡಲಾಗಿದ್ದು ಅದರಲ್ಲಿ ದೀಪಿಕಾ ಮಾದಕವಸ್ತು ಒದಗಿಸುವಂತೆ ಸೂಚಿಸಿದ್ದು ದಾಖಲಾಗಿದೆ. ಕೆವಾನ್ ಟ್ಯಾಲಂಟ್ ನಿರ್ವಹಣಾ ಸಂಸ್ಥೆಯ ಉದ್ಯೋಗಿ ಜಯಾ ಸಹಾ ಹೆಸರೂ ನಂತರ ತಿಳಿದು ಬಂದಿತ್ತು. ಶ್ರದ್ಧಾ ಕಪೂರ್, ಮಧು ಮಂಟೇನಾ ಮತ್ತು ಇತರ ಕೆಲವರಿಗೆ ತಾನು ಸಿಬಿಡಿ ತೈಲ ಪೂರೈಸಿದ್ದಾಗಿ ವಿಚಾರಣೆ ವೇಳೆ ಜಯಾ ಒಪ್ಪಿಕೊಂಡಿದ್ದರು. ಈ ನಡುವೆ, ರಿಯಾ ಚಕ್ರವರ್ತಿಗೆ ಸಂಬಂಧಿಸಿದ ಡ್ರಗ್ಸ್ ಚಾಟ್ಗಳ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾರೆ.
ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಮೊಬೈಲ್ನಲ್ಲಿದ್ದ ಚಾಟ್ಗಳ ಆಧಾರದಲ್ಲಿ ದೀಪಿಕಾ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮೊದಲಾದವರ ಹೆಸರು ಬಹಿರಂಗವಾಗಿದೆ. ಇವರೆಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ಎನ್ಸಿಬಿ ಸಮನ್ಸ್ ನೀಡಿತ್ತು. ಫ್ಯಾಶನ್ ವಿನ್ಯಾಸಗಾರ ಸಿಮೋನ್ ಖಂಬತ್ತ, ಶ್ರುತಿ ಮೋದಿ ಸಮನ್ಸ್ ಪಡೆದಿರುವ ಇತರ ಪ್ರಮುಖರು.
ಉಸಿರುಗಟ್ಟಿಸಿ ಕೊಲೆ
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕತ್ತುಹಿಸುಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಅವರ ವಕೀಲ ವಿಕಾಸ್ ಸಿಂಗ್ ಶುಕ್ರವಾರ ಹೇಳಿದ್ದಾರೆ. ಇದರಿಂದ ಪ್ರಕರಣಕ್ಕೆ ತಿರುವು ಸಿಗುವ ಸಂಭವವಿದೆ. ಸುಶಾಂತ್ರ ವಿಸೆರಾವನ್ನು ಪರೀಕ್ಷೆಗಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್್ಸ) ಕಳಿಸಲಾಗಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವುದು ಶೇ. 200ರಷ್ಟು ಖಚಿತ ಎಂಬುದಾಗಿ ಏಮ್್ಸ ತಂಡವೊಂದರ ವೈದ್ಯರು ಹೇಳಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಏಮ್ಸ್ನ ವಿಸೆರಾ ಪರೀಕ್ಷಾ ವರದಿಯನ್ನು ಸಿಬಿಐ ಎದುರು ನೋಡುತ್ತಿದ್ದು ಅದು ಬಂದ ಮೇಲೆ ಸಾವಿನ ಕಾರಣ ಸ್ಪಷ್ಟವಾಗಲಿದೆ.
ಕರಣ್ ಜೋಹರ್ಗೆ ಎನ್ಸಿಬಿ ಬುಲಾವ್?
2019ರಲ್ಲಿ ನಡೆದ ಪಾರ್ಟಿಯೊಂದರ ಸಂಬಂಧ ವಿಚಾರಣೆ ನಡೆಸಲು ನಿರ್ದೇಶಕ, ನಿರೂಪಕ ಕರಣ್ ಜೋಹರ್ಗೆ ಎನ್ಸಿಬಿ ಸಮನ್ಸ್ ನೀಡುವ ಸಾಧ್ಯತೆ ಇದೆ. ಆ ಪಾರ್ಟಿಯಲ್ಲಿ ಹಲವಾರು ಖ್ಯಾತ ನಟ-ನಟಿಯರು ಡ್ರಗ್ಸ್ ನಶೆಯಲ್ಲಿ ಓಲಾಡುತ್ತಿದ್ದರು ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗಿತ್ತು.
ರಣವೀರ್ ಮನವಿ
ದೀಪಿಕಾ ವಿಚಾರಣೆ ವೇಳೆ ಅವರೊಂದಿಗೆ ಹಾಜರಿರಲು ಅನುಮತಿ ನೀಡುವಂತೆ ಪತಿ, ನಟ ರಣವೀರ್ ಸಿಂಗ್ ಮನವಿ ಮಾಡಿದ್ದಾರೆ. ದೀಪಿಕಾ ಆತಂಕದ ಸಮಸ್ಯೆ ಎದುರಿಸುತ್ತಿದ್ದು, ಒಮ್ಮೊಮ್ಮೆ ಗಾಬರಿಯಿಂದ ಬೆಚ್ಚಿ ಬೀಳುತ್ತಾರೆ. ಹಾಗಾಗಿ ವಿಚಾರಣೆ ವೇಳೆ ಕಚೇರಿಯಲ್ಲಿ ಉಪಸ್ಥಿತರಿರಲು ಅನುಮತಿ ನೀಡಬೇಕೆಂದು ರಣವೀರ್ ಹೇಳಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News