Breaking News

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ವೆಂಟಿಲೇಟರ್ ರಫ್ತು ಮಾಡಲು ಹೊರಟಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಪ್ರತಿದಿನ 5000ಕ್ಕೂ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗುತ್ತಿವೆ, ಸರಾಸರಿ 80-90 ಮಂದಿ ಸಾಯುತ್ತಿದ್ದಾರೆ.‌ ಆದರೆ ಸಚಿವ ಹರ್ಷವರ್ಧನ್ ಪ್ರಕಾರ ಕೋವಿಡ್ ಸಾವಿನ ಪ್ರಮಾಣ ಇಳಿಯುತ್ತಿದೆಯಂತೆ. ಅದಕ್ಕಾಗಿ ವೆಂಟಿಲೇಟರ್ ರಫ್ತಿಗೆ ಅವಕಾಶಕ್ಕೆ ಕೊಡ್ತಾರಂತೆ. ಇದು ಹೃದಯಹೀನ‌ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸಾವು ಹೆಚ್ಚಳಕ್ಕೆ ವೆಂಟಿಲೇಟರ್ ಕೊರತೆಯೂ ಒಂದು ಕಾರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 57,396. ಲಭ್ಯ ಇರುವ ವೆಂಟಿಲೇಟರ್ ‌ಗಳು ಕೇವಲ 801. ಒಟ್ಟು ರಾಜ್ಯದ ಸ್ಥಿತಿ ಇನ್ನೂ ಚಿಂತಾಜನಕ.
ಆದರೆ ಮೋದಿ ಸರ್ಕಾರಕ್ಕೆ ರಫ್ತು ಹೆಚ್ಚಿಸುವ ಚಿಂತೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಸೋಂಕು ಅನಿಯಂತ್ರಿತವಾಗಿ ಹರಡುವುದಕ್ಕೂ, ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ. ಈ ಕಾರಣಕ್ಕಾಗಿ ನಾವು ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರ ಕಷ್ಟದ ಕಾಲದಲ್ಲಿ ವಿರೋಧ ಪಕ್ಷಗಳು ಸಹಕಾರ ನೀಡಬೇಕು, ಆರೋಪ ಮಾಡುವುದು ಸರಿಯೇ ಎಂದು ಮುಖ್ಯಮಂತ್ರಿಗಳು ಕೇಳ್ತಿದ್ದಾರೆ. ಇಂತಹ ಸಾವು-ನೋವಿನ ಕಷ್ಟ ಕಾಲದಲ್ಲಿ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರ ಮಾಡುವುದು ಸರಿಯೇ? ಎಂದು ನಾವು ಕೇಳುತ್ತಿದ್ದೇವೆ. ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಹೇಳಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮಿಂದ ಸಹಕಾರ ನಿರೀಕ್ಷಿಸುವ ಬಿಜೆಪಿ ಸರ್ಕಾರ, ಕೋವಿಡ್ ಕಾಲದಲ್ಲಿ ಮಧ್ಯಪ್ರದೇಶದ ನಮ್ಮ ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಯಾಕೆ‌ ಸಹಕಾರ ಕೊಡಲಿಲ್ಲ? ರಾಜಸ್ತಾನದ‌ ನಮ್ಮ ಸರ್ಕಾರವನ್ನು ಉರುಳಿಸಲು ಹೊರಟದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೋವಿಡ್ ಸಾವು-ನೋವುಗಳಲ್ಲಿ ಮಹಾರಾಷ್ಟ್ರ-ತಮಿಳುನಾಡುಗಳನ್ನು ಮೀರಿಸಿ ಕರ್ನಾಟಕ ನಂಬರ್ ಒನ್ ಆಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ‌ ಆಗಲಾರದೇ? ಸೋಂಕಿತರಿಗೆ ಬೆಡ್ ಇಲ್ಲ, ಔ಼ಷಧಿ, ಊಟ ಕೊಡ್ತಿಲ್ಲ, ಅಂಬ್ಯುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ. ಬೀದಿಯಲ್ಲಿಯೇ ಹೆಣವಾದರು, ಸತ್ತಮೇಲೆಯೂ ದಪನ ಮಾಡುವವರಿಲ್ಲ ಎನ್ನುವುದೇ ಮಾಧ್ಯಮಗಳಲ್ಲಿ ನಿತ್ಯ ಸುದ್ದಿಯಾಗಿದೆ. ರಾಜ್ಯದಲ್ಲಿ ಸೋಂಕಿನ ಸಂಖ್ಯೆ,1,29,287ಕ್ಕೆ ಸಾವಿನ ಸಂಖ್ಯೆ 2412ಕ್ಕೆ ಏರಿದೆ. ನಾವು ಸುಮ್ಮನಿರಬೇಕಾ ಎಂದು ಸಿದ್ದರಾಮಯ್ಯ ತನ್ನ ಟ್ವೀಟ್ ನಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯದ ಜನ ಜನ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಪೂರೈಕೆ ಯಂತ್ರಗಳಿಲ್ಲ, ಊಟ-ತಿಂಡಿ ಇಲ್ಲ, ಉದ್ಯೋಗ ಇಲ್ಲ ಎಂದು ಗೋಳಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟ ಕಾಣಲಿಲ್ಲ, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಗಳಿಸಬಹುದಾದ ದುಡ್ಡು‌ಕಾಣುತ್ತಿದೆ. ಈ ಅಕ್ರಮದ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರೆ “ಮಾಹಿತಿ ಕೊಡಿ’ ಎನ್ನುತ್ತಾರೆ. ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅದು ಸುಳ್ಳು ಎನ್ನುತ್ತಾರೆ. ತನಿಖೆ ಮಾಡಿಸಿ ಎಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆ ಎಂದು ಕೇಳ್ತಾರೆ. ಜನರ ಬಳಿ ಹೋಗದೆ ನಮಗೆ ಬೇರೆ ದಾರಿ ಏನಿದೆ ಎಂದರು.
24 ಗಂಟೆಯೊಳಗೆ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ಮಾಹಿತಿ ಕಳಿಸಿಕೊಡ್ತೇವೆ ಎಂದು ಸಿಎಂ ಬಿಎಸ್ ವೈ ಹೇಳಿ 24 ದಿನ ಕಳೆದು ಹೋಗಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಒಂದು ಹಾಳೆ ಮಾಹಿತಿ ನನಗೆ ಬಂದಿಲ್ಲ. ಸತ್ಯ ಹೇಳಲು ನಿಮಗೆ ಭಯ ಯಾಕೆ? ನಾನು ಬಹಿರಂಗವಾಗಿ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಕೋಟ್ಯಂತರ ರೂಪಾಯಿಯ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲಾ ಎಂದು ಇವರಿಗೆಲ್ಲ ನನ್ನ ಮೇಲೆ ಕೋಪ. ಅದಕ್ಕಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು ಬಿಜೆಪಿ ನಮ್ಮ‌ ಕೆಲಸವನ್ನು ಸುಲಭ‌ ಮಾಡಿದೆ. ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲಾ? ಕೋರ್ಟ್ ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲಾ ಎಂದು ವ್ಯಂಗ್ಯವಾಡಿದರು.

About vijay_shankar

Check Also

ಶಾಸಕರಾದ ನಂತರ ಮೊಟ್ಟ ಮೊದಲ ಬಾರಿಗೆ ಪಟ್ಟಣ ಪಂಚಾಯತಿಗೆ ದೀಡಿರ್ ಬೇಟಿ ನೀಡಿದ ಎಚ್ ವೈ ಮೇಟಿ

ಅಮೀನಗಡ : ಬಾಗಲಕೋಟೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಮೇಟಿ ಅವರು ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.