Breaking News

ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಅಧಿಕಾರ ಸ್ವೀಕಾರ!

BB News : ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಕೊನೆಗೂ ಅಳೆದು ತೂಗಿ ಹೆಸರು ಫೈನಲ್ ಮಾಡಿದೆ. ಶಿಗ್ಗಾಂವ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿ ಎಂದು ಹೈಕಮಾಂಡ್ ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಜಾತಿ ಲೆಕ್ಕಾಚಾರ, ಮುಂದಿನ ಚುನಾವಣೆಯ ಉದ್ದೇಶ ಮುಂತಾದ ನೆಲಗಟ್ಟಿನಲ್ಲಿ ಕಳೆದೊಂದು ವಾರದಿಂದ ಚರ್ಚೆ ಶುರುವಾಗಿತ್ತು. ಯಡಿಯೂರಪ್ಪ ನಂತರ ಯಾರಾಗಲಿದ್ದಾರೆ ಮುಖ್ಯಮಂತ್ರಿ ಎಂಬ ಚರ್ಚೆಗಳಿಗೆ ಇಂದು ಉತ್ತರ ದೊರೆತಿದೆ.

ರಾಜ್ಯದ ನೂತನ ಸಿ,ಎಮ್ ಬಸವರಾಜ ಬೊಮ್ಮಯಿ


ಮುಖ್ಯಮಂತ್ರಿ ರೇಸ್‍ನಲ್ಲಿ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಡಿಸಿಎಂ ಸಿ.ಎನ್. ಅಶ್ವತ್ಥನಾರಾಯಣ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು.
ಮಾಧ್ಯಮಗಳೂ ಸಹ ಇವರೆಲ್ಲರ ಅರ್ಹತೆ ಅನರ್ಹತೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದವು. ಯಾವ ಅಭ್ಯರ್ಥಿಗೆ ಪ್ಲಸ್ ಯಾವುದು, ಮೈನಸ್ ಯಾವುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದವು.
ಅದಾಗಲೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾಇಸಿದ್ದ ಹೈಕಮಾಂಡ್, ಇಂದು ಅಧಿಕೃತವಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಘೋಷಣೆ ಮಾಡಿದೆ.


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದು ನಿಶ್ಚಿತವಾಗುತ್ತಿದ್ದಂತೆ ರಾಜ್ಯದ ಬಹುತೇಕ ಎಲ್ಲ ಲಿಂಗಾಯತ ಸಮುದಾಯದ ಮಠಗಳ ಸ್ವಾಮೀಜಿಗಳು ಬೀದಿಗಿಳಿದಿದ್ದರು. ಯಡಿಯೂರಪ್ಪ ರಾಜೀನಾಮೆ ನೀಡುವುದರಿಂದ ಲಿಂಗಾಯಿತ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬಿದ್ದಂತಾಗಿತ್ತು. ಇದರ ಸೂಕ್ಷ್ಮವನ್ನರಿತ ಹೈಕಮಾಂಡ್, ನೂತನ ಸಿಎಂ ಯಾರಾಗಬೇಕು ಎಂಬ ಆಯ್ಕೆಯ ಅವಕಾಶವನ್ನು ಯಡಿಯೂರಪ್ಪ ಅವರಿಗೇ ಬಿಟ್ಟಿತ್ತು – ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯದವರೇ ಆದ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಮಾಡುವುದರಿಂದ ಬಿಜೆಪಿ ಲಿಂಗಾಯತ ಸಮುದಾಯದ ಆಕ್ರೋಶವನ್ನು ಕಡಿಮೆ ಮಾಡಿಕೊಂಡಂತಾಗಿದೆ.

ನೂತನ ಸಿ,ಎಮ್ ಗೆ ಶುಭಾಶಯ ಕೋರಿದ ಬಿ,ಎಸ್,ಯಡಿಯೂರಪ್ಪ


ಬಿಎಸ್‍ವೈ ಆಯ್ಕೆ ಮಾಡಿದವರನ್ನೇ ಮುಖ್ಯಮಂತ್ರಿ ಮಾಡಿರುವುದರಿಂದಾಗಿ ಬಿಎಸ್‍ವೈ ವಿರೋಧಿ ಬಣದ ಪಿತೂರಿಯಿಂದಾಗಿ ಸೋತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ತಮ್ಮ ಆಪ್ತರನ್ನೇ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸುವ ಮೂಲಕ ಗೆದ್ದು ತಮ್ಮದೇ ಮೇಲುಗೈ ಎಂದು ತೋರಿಸಿಕೊಟ್ಟಂತಾಗಿದೆ.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ನಾಳೆ ಮಧ್ಯಾಹ್ನ 3.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಸವರಾಜ್ ಬೊಮ್ಮಾಯಿ ಅವರು, ನನ್ನ ಹೆಸರನ್ನು ಸೂಚಿಸಿ ಬಿ.ಎಸ್. ಯಡಿಯೂರಪ್ಪ ಆಶೀರ್ವಾದ ಮಾಡಿದ್ದಾರೆ.

ಕೇಂದ್ರದ ವರಿಷ್ಟರಾದ ಅಮಿತ್‍ಶಾ, ನರೇಂದ್ರ ಮೋದಿ ಅವರಿಗೆ, ಆಯ್ಕೆಗೆ ಸಹಕರಿಸಿದ ಎಲ್ಲ ಶಾಸಕರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ನಂತರ ರಾಜಭವನಕ್ಕೆ ಶಾಸಕರೊಂದಿಗೆ ತೆರಳಿದ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಾವು ನೂತನ ಶಾಸಕಾಂಗಸಭೆಯ ನಾಯಕರಾಗಿರುವ ಬಗ್ಗೆ ಪತ್ರ ನೀಡಿ, ಸರ್ಕಾರ ರಚಿಸಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿ ಅವರ ಕಿರು ಪರಿಚಯ:
ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಎಸ್‍ಆರ್ ಬೊಮ್ಮಾಯಿ-ಚೆನ್ನಮ್ಮ ಅವರ ಪುತ್ರ. 1960ರ ಜನವರಿ 28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.ಯಡಿಯೂರಪ್ಪ ಅವರ ಸಂಪುಟದಲ್ಲಿ ಮುಖ್ಯಮಂತ್ರಿಗಳ ಬಳಿಕ ಎರಡನೇ ಪ್ರಬಲ ಖಾತೆಯಾದ ಗೃಹ ಖಾತೆಯನ್ನೂ ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಅವರು ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದು ಜನತಾದಳದಿಂದ.


1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದರು. 2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು.
ವಿರೋಧಪಕ್ಷದ ಉಪನಾಯಕ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್.ಆರ್. ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ನಾಳೆ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.