Breaking News

ಅಪ್ಪ-ಮಗನ ನಿಜ ಬಣ್ಣ ಬಯಲಾಗಲಿದೆ: ಸಿಎಂ ಮತ್ತು ವಿಜಯೇಂದ್ರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, “ಯತ್ನಾಳ್ ಅವರಷ್ಟು  ಹಗಲು ಕನಸು ಕಾಣುವ ವ್ಯಕ್ತಿ ಈ ಭೂಮಿ ಮೇಲೆ ಇಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಅಪ್ಪ- ಮಗನ ನಿಜ ಬಣ್ಣ ಬಯಲಾಗಲಿದೆ, ಮೇ 2 ರ ನಂತರ ಮುಖ್ಯಮಂತ್ರಿ ಯಡಿಯೂರಪ್ಪರ ಬದಲಾವಣೆ ಆಗುವುದು ಗ್ಯಾರಂಟಿ. ಮೇ 2ರ ನಂತರ ಯಾವ ಸಮಯದಲ್ಲಾದರೂ ಬದಲಾವಣೆ ಆಗುತ್ತಾರೆ ಎಂದು ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಹಿಂದಿನಿಂದಲೂ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದು, ಪ್ರತಿ ಬಾರಿಯು ಸಿಎಂ ವಿರುದ್ದ ಬಹಿರಂಗವಾಗಿ ಟೀಕೆ ಮಾಡುತ್ತಾ ಬಂದಿದ್ದಾರೆ. ಅವರು ಈ ಹಿಂದೆಯೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ಯಡಿಯೂರಪ್ಪ ವಿರುದ್ದ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್‌, “ಮೇ 2 ರ ನಂತರ ಯಡಿಯೂರಪ್ಪ ಬದಲಾವಣೆ ಆಗುವುದು ಗ್ಯಾರಂಟಿ. ಮೇ 2ರ ನಂತರ ಯಾವ ಸಮಯದಲ್ಲಾದರೂ ಬದಲಾವಣೆ ಆಗುತ್ತಾರೆ. ಪಕ್ಷ ಉಳಿಯಬೇಕು ಎಂದರೆ ಮೇ 2 ರ ನಂತರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲೇಬೇಕು. ಇಲ್ಲ ಅಂದರೆ ಪಕ್ಷ ಎಲ್ಲಿ ಉಳಿಯುತ್ತೆ?’’ ಎಂದು ಪ್ರಶ್ನೆ ಮಾಡಿದ್ದಾರೆ.

“ಇನ್ನೂ ಸ್ವಲ್ಪ ದಿನಗಳಲ್ಲೇ ಅಪ್ಪ-ಮಗನ ನಿಜ ಬಣ್ಣ ಬಯಲಾಗಲಿದೆ. ವಿಜಯೇಂದ್ರ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತೆ. ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯದವರು ಕರೆದುಕೊಂಡು ಹೋಗಿಲ್ಲ ಎಂದು ಹೇಳಲಿ. ನಾನು ಅವರಿಗೆ ಚಾಲೆಂಜ್ ಮಾಡುತ್ತೇನೆ. ಡಿಕೆಶಿಯನ್ನು ಇಡಿಯವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದರಲ್ಲ. ಅಲ್ಲಿಗೆ ವಿಜಯೇಂದ್ರರನ್ನು ಕರೆದುಕೊಂಡು ಹೋಗಿ ಇಡಿಯವರು ವಿಚಾರಣೆ ಮಾಡಿದ್ದಾರೆ. ಸೂಟು- ಬೂಟು ಹಾಕೊಂಡು ಹೋಗಿದ್ರು. ಅದೆನ್ನೆಲ್ಲಾ ಬಿಚ್ಚಿಸಿ, ಡಿಕೆಶಿ ತರನೇ ವಿಜಯೇಂದ್ರರನ್ನು ವಿಚಾರಣೆ ಮಾಡಿದ್ದಾರೆ. ಇದೆಲ್ಲೆವೂ ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ. ಅಪ್ಪ- ಮಗನ ನಿಜ ಬಣ್ಣ ಬಯಲಾಗಲಿದೆ” ಎಂದು ಯತ್ನಾಳ್ ಹೇಳಿದ್ದಾರೆ.

ಯಾರೋ ಒಬ್ಬರು ಚಿಲ್ಲರೆ ಪಲ್ಲರೆಗಳ ಕೈಯಲ್ಲಿ ಮಾತನಾಡಿಸುತ್ತಾರೆ. ತಾಕತ್ತಿದ್ದರೆ ನನ್ನ ಬಗ್ಗೆ ಅಪ್ಪ- ಮಗ ಮಾತಾಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.

ಯಾರ ಯಾರ ನಾಯಕತ್ವ ಎಷ್ಟೆಷ್ಟು ಅನ್ನೋದು ಗೊತ್ತಾಗುತ್ತೆ. ಈಶ್ವರಪ್ಪ ಈಲ್ಡ್ ಆಗಿಲ್ಲ ಅನಿಸ್ತದೆ. ಈಶ್ವರಪ್ಪ ರಾಜ್ಯಪಾಲರ ಭೇಟಿ ಮಾಡಿದ್ದು ನನಗೇನೂ ಗೊತ್ತಿರಲಿಲ್ಲ ಎಂದರು. ಪಕ್ಷದ ಒಳಗೆ ಮಾತನಾಡುವಂತೆ ಯತ್ನಾಳ್ ಗೆ ಈಶ್ವರಪ್ಪ ಬುದ್ದಿ ಮಾತು ಹೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷದ ವೇದಿಕೆ ಅನ್ನೋದು ಏನು ರಾಜ್ಯಪಾಲರ ಕಚೇರಿಯಾ? ಎನ್ನುವ ಮೂಲಕ ಪರೋಕ್ಷವಾಗಿ ನೀವು ಪಕ್ಷ ವಿರೋಧಿಯಾಗಿ ನಡೆದುಕೊಂಡಿಲ್ವಾ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದರು.

ಇನ್ನೂ ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ. ಏಪ್ರಿಲ್ 17 ರ ನಂತರಶಾಸಕರು ಸಚಿವರು ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ. ಸೂರ್ಯ ಚಂದ್ರ ಇರುವವರೆಗೆ ಯಡಿಯೂರಪ್ಪನವರೇ ಸಿಎಂ ಅಂದ್ರೆ ಏನರ್ಥ?. ಯಡಿಯೂರಪ್ಪ ಫ್ಯಾಮಿಲಿಗೇನಾದರೂ ರಾಜ್ಯವನ್ನು ಬರೆದುಕೊಟ್ಟಿದ್ದಾರಾ..? ಪಕ್ಷದ ಸಿದ್ದಾಂತದ ಹಿನ್ನೆಲೆಯಲ್ಲಿ ಎರಡು ವರ್ಷ ಅವಕಾಶ ಕೊಟ್ಟಿದ್ದೇ ದೊಡ್ಡದ್ದು ಎಂದು ಹೇಳಿದರು.

ಯತ್ನಾಳ್ ಹೇಳಿಕೆಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪ್ರತಿಕ್ರಿಯಿಸಿದ್ದು, “ಯತ್ನಾಳ್ ಅವರಷ್ಟು  ಹಗಲು ಕನಸು ಕಾಣುವ ವ್ಯಕ್ತಿ ಈ ಭೂಮಿ ಮೇಲೆ ಇಲ್ಲ” ಎಂದು ಹೇಳಿದ್ದಾರೆ.

About vijay_shankar

Check Also

AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ

ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.