ಪ್ರಜೆಗಳು ನಮ್ಮನ್ನು ಆಳಬೇಕು,ಹೊರತು ನಾವು ಪ್ರಜೆಗಳನ್ನು ಆಳಬಾರದು ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಹೇಳಿದಂತೆ,
- ಪ್ರಜೆಗಳು ಪ್ರಜೆಗಳನ್ನು ಪ್ರಜೆಗಳಿಗೆ ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವ ಸರ್ಕಾರವೇ ಪ್ರಜಾಪ್ರಭುತ್ವ ಹಾಗಾದರೆ ಪ್ರಜೆಗಳು ಆಡಳಿತ ಮಾಡಬಹುದು ಎಂದ ಮಾತ್ರಕ್ಕೆ ಅವರ ಇಷ್ಟದ ಪ್ರಕಾರ ಆಡಳಿತ ನಡೆಸಬೇಕಾ? ಇಲ್ಲವೇ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಪಾತ್ರರಾಗಬೇಕೇ? ಎಂಬುದು ಯಕ್ಷ ಪ್ರಶ್ನೆ.ಇಲ್ಲಿ ಯಾರು ಯಾರನ್ನು ಆಡಳಿತ ಮಾಡಬೇಕು? ಈ ಪ್ರಶ್ನೆಗೆ ಉತ್ತರ ಯಾರು ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೋ ಅವರು ಆಡಳಿತ ನಡೆಸಬೇಕು. ಹಾಗಾದರೆ ಇದರಲ್ಲಿ ಎಷ್ಟು ಜನ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಆಯ್ಕೆಯಾಗುತ್ತಾರೆ?
ಹೆಂಡಕ್ಕೆ ಮಾರಾಟಕ್ಕಿವೆ ಮತಗಳು :
- ನಮ್ಮ ಮತಗಳನ್ನು ನಾವು ಕೇವಲ ಒಂದೆರು ಸೊನ್ನೆಗೆ ಮಾರಿದ್ದೇವೆ.ಉದಾಹರಣೆಗೆ ನಮ್ಮ ಮತವನ್ನು ಅಭ್ಯರ್ಥಿಗಳು ತಾವು ಆಯ್ಕೆ ಮಾಡುವ ಪ್ರಭುಗಳಿಗೆ ಚುನಾವಣಾ ಹಿಂದಿನ ದಿನ ಅಥವಾ ಹಲವು ದಿನಗಳ ಮೊದಲೇ ಹೆಂಡದ ಅಭಿಷೇಕ ಮಾಡಿರುತ್ತಾರೆ.ನಮ್ಮ ಮತಗಳು ಮಾರಾಟವಾಗುತ್ತಿವೆ. ಹೆಂಡ ಕುಡಿದ ನಾವುಗಳು ಅದರ ನಶೆಯಲ್ಲಿ ಯಾರಿಗೆ ಮತ ಚಲಾಯಿಸಿದ್ದೇವೆ? ಎನ್ನುವುದು ಮರೆತು ಹೋಗುತ್ತದೆ.ಅವರು ಕೊಡುವ ಹೆಂಡ ನಮ್ಮನ್ನು ಒಂದೆರಡು ದಿನಗಳಲ್ಲಿ ಪಾನ ಮತ್ತರನ್ನಾಗಿ ಮಾಡಲು ಪ್ರೇರಣೆ ನೀಡುತ್ತದೆ.
- ಕೇವಲ ನಮ್ಮ ಮತಗಳು ೫೦೦,೧೦೦೦ ರೂಪಾಯಿಗಳಿಗೆ ಮಾರುತ್ತೇವೆ.ಒಂದಷ್ಟು ಯೋಚಿಸಿ. ನಮ್ಮ ಮತದ ಬೆಲೆ ಇಷ್ಟೆನಾ? ಅಥವಾ ನಮ್ಮ ಯೋಗ್ಯತೆ ಇಷ್ಟೇನಾ?ಅವರು ಕೊಡುವ ಒಂದು ದಿನದ ಕೂಲಿಗೆ ಐದು ವರ್ಷಗಳ ಕಾಲ ನಮ್ಮನ್ನು ನಾವು ಗುಲಾಮರನ್ನಾಗಿ ಮಾಡಿಕೊಳ್ಳಲಾಗುತ್ತದೆ.ಒಂದು ದಿನದ ಕೂಲಿಗೆ ಮಾರಾಟ ಮಾಡಿದ ನಾವುಗಳು ಮತ್ತೆ ನಾವು ಆಯ್ಕೆ ಮಾಡಿದ ನಮ್ಮ ಪ್ರಭುಗಳ ಹತ್ತಿರ ಹೋಗಿ ನಮ್ಮ ಕಷ್ಟ ಸುಖ ಕೇಳಿದಾಗ, ನಮ್ಮ ಪ್ರಭು ಅದಾಗಲೆ ನಮ್ಮನ್ನು ಮಾರಾಟಕ್ಕೆ ತೆಗೆದುಕೊಂಡಿದ್ದು,ನಮ್ಮ ಮತವನ್ನು ನಾವೇ ಮಾರಿಕೊಂಡಿದ್ದನ್ನು ಕಂಡು ಕೇವಲ ಆಶ್ವಾಸನೆ ನೀಡುತ್ತಾನೆ ಅಷ್ಟೇ. ಕೇವಲ ಒಂದು ದಿನದ ಕೂಲಿಗೆ ಸಮನಾಗದ ಈ ಹೆಂಡ ಕುಡಿಸುವ ಸಂಪ್ರದಾಯ ಇಂದು ನಿನ್ನೆಯದಲ್ಲ.
- ಕೇವಲ ೨೫೦-೩೦೦ ರೂಪಾಯಿಗಳಿಗೆ ಸೀರೆ ಕೊಡ್ತಿದಾರೆ.ಹಾಗಾದರೆ ನಮ್ಮ ಮತ ಕೇವಲ ಒಂದು ಸೀರೆಗೆ ಮಾರಾಟವಾಗುತ್ತದೆ. ನಮ್ಮನ್ನು ಆಳುವ ಪ್ರಜೆಗಳು ನಮಗೆ ಒಂದು ಆಸೆ ತೋರಿಸಿದರೆ ಹಸಿದ ನಾಯಿ ಹಳಸಿದ ಅನ್ನಕ್ಕೆ ಬಾಯಿ ತೆರೆದಂತೆ ನಮ್ಮನ್ನು ನಾವು ಹಸಿದ ನಾಯಿಗಳಿಗೆ ಆಹಾರವಾಗುವೆವು.ಅವರು ಕೊಡುವ ಒಂದು ಸೀರೆಯ ಬೆಲೆ ಎಷ್ಟು? ಹಾಗಾದರೆ ನಮ್ಮ ಪೀಳಿಗೆಯವರು ಕೇವಲ ನಮ್ಮ ತಂದೆ ತಾಯಿ ನನ್ನ ಹೆಂಡತಿಗೆ ಒಂದು ಸೀರೆ ಕೊಡಿಸುವ ಯೋಗ್ಯತೆ ಇಲ್ಲವೇ? ಅವರು ಕೊಡುವ ಪಟ್ಟೆ ಪೀತಾಂಬರ ಅಲ್ಲ
- ಯೋಚಿಸಿ ನಾನು ಆಯ್ಕೆ ಮಾಡುತ್ತಿರುವುದು ಯಾರನ್ನು? ಏಕೆ ಆಯ್ಕೆ ಮಾಡಬೇಕು? ಹೇಗೆ ಅವನಿಂದ ಆಳಿಸಿಕೊಳ್ಳಬೇಕು? ಎಂಬುದನ್ನು ತಿಳಿಯಬೇಕಿದೆ.ಹಾಗಾಗಿ ಈ ಎಲ್ಲ ಪ್ರಶ್ನೆಗಳನ್ನು ನಾನು ನನಗೆ ಕೇಳಿದಾಗ ನಿಜವಾದ ಜನನಾಯಕ ಆಯ್ಕೆಯಾಗುತ್ತಾನೆ.ನಮ್ಮನ್ನಾಳುವ ದೊರೆ ಕೊಡುವ ಎಂಜಲು ಕಾಸಿಗೆ ಕೈ ಒಡ್ಡುವ ನಾವು ನಮ್ಮ ತನವನ್ನು ಕಳೆದುಕೊಂಡು ಹೋಗುತ್ತಿದ್ದೇವೆ.ಮತ್ತೆ ನಾವು ಅವರಿಗೆ ನೆನಪಾಗುವುದು ಮುಂದಿನ ಐದು ವರ್ಷಗಳ ನಂತರ. ಇದು ವಾಸ್ತವವಾಗಿ ಸತ್ಯ.
- ಮಾನವೀಯತೆಯ ಮೌಲ್ಯಗಳು ಒಟ್ಟುಗೂಡಿ ಶವಾಗಾರದ ಹಾದಿಯಲ್ಲಿ ಬೂದಿಯಾಗಿವೆ.ಇವುಗಳ ಜಾಗಕ್ಕೆ ರಕ್ಕಸ ಮನಸ್ಸುಗಳು ತಾಂಡವವಾಡುತ್ತಿವೆ.ಏಕೆ?ನಮ್ಮನ್ನು ಆಳಿಕೊಳ್ಳುವ ಶಕ್ತರನ್ನು ನಾವು ನಾವು ಅಧಿಕಾರಕ್ಕೆ ತರೋಣ.ಬಾಲ ಬಡುಕರನ್ನು ಬಿಟ್ಟು ನಿಸ್ವಾರ್ಥ ಸೇವೆ ಸಲ್ಲಿಸುವ ಪ್ರಜ್ಞಾವಂತರನ್ನು ಆಯ್ಕೆ ಮಾಡೋಣ. ಭಾರತ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು. ಮತವನ್ನು ದಾನ ಮಾಡಿ ಎಂದು.ಮತವನ್ನು ಮಾರಿ ಎಂದಲ್ಲ. ನಮ್ಮ ಮತವನ್ನು ನಾವು ಮಾರಿದರೆ ನಾವು ನಮ್ಮ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುವುದಿಲ್ಲವೇ? ಹಾಗಾದರೆ ನಾವು ಮಾಡುವ ಮತ ನಮ್ಮ ಹಕ್ಕು. ಅರ್ಥ ಬದ್ದವಾಗಿ ದಾನ ಮಾಡೋಣ.ನಾವು ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳೋಣ.ಬೇರೆ ದೇಶಗಳಲ್ಲಿರುವಂತೆ ಸರ್ವಾಧಿಕಾರಿ ಧೋರಣೆ ಇಲ್ಲ. ಜಾತ್ಯಾತೀತ ರಾಷ್ಟ್ರವಾಗಿದ್ದು ಇಲ್ಲಿ ಪ್ರಜೆಗಳು ಪ್ರಭುಗಳಾಗಬೇಕೇ ವಿನಃ ಪ್ರಭುಗಳು ಪ್ರಜೆಗಳ ಜಾಗದಲ್ಲಿ ನಿಂತು ನೋಡಿದರೆ ನಮ್ಮ ಆಯ್ಕೆ ಸರಿಯೆಂದು ಕಂಡುಬರುತ್ತದೆ.ಇಂದೇ ಪ್ರತಿಜ್ಞೆ ಮಾಡೋಣ. ಈ ದೇಶದ ನಾಗರಿಕನಾದ ನಾನು ನನ್ನ ಮತವನ್ನು ಯಾರಿಗೂ ಮಾರಾಟ ಮಾಡುವುದಿಲ್ಲವೆಂದು. ಆಗ ನಾವು ಆಚರಿಸುವ ಪ್ರಜಾಪ್ರಭುತ್ವದ ಕಲ್ಪನೆ ಅರ್ಥ ಪೂರ್ಣವಾಗುತ್ತದೆ.