ಬೆಳಗಾವಿ, ಆಗಸ್ಟ್ 22: ಬೆಳಗಾವಿಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಕಷ್ಟ ನಷ್ಟಗಳು ಸಂಭವಿಸಿವೆ. ಈ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಸ್ಟ್ 24ರಂದು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಡಿಕೆಶಿ ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರ ಗೋಕಾಕನ್ನೇ ಪ್ರವಾಹ ವೀಕ್ಷಣೆಗೆ ಆಯ್ದುಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲೆಯ ಖಾನಾಪುರ, ರಾಮದುರ್ಗ, ಸವದತ್ತಿ ಹಾಗೂ ಚಿಕ್ಕೋಡಿ, ಅಥಣಿ ಭಾಗಗಳು ಕೂಡ ಪ್ರವಾಹದಿಂದ ಅತಿಹೆಚ್ಚು ಹಾನಿಯಾಗಿವೆ. ಆದರೂ ಅತೀ ಹೆಚ್ಚು ಹಾನಿಯಾದ ಪ್ರದೇಶ ಬಿಟ್ಟು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿಕೆಶಿ ಪ್ರವಾಸ ಮಾಡುತ್ತಿದ್ದಾರೆ.
ಘಟಪ್ರಭಾ ನದಿ ನೀರು ಇಳಿಕೆ: ನಿಟ್ಟುಸಿರು ಬಿಟ್ಟ ಗೋಕಾಕ್ ಜನತೆ
ಸಚಿವ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಅರಭಾಂವಿ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಡಿಕೆಶಿ ಸುತ್ತಾಡಲಿದ್ದಾರೆ.
ಆಗಸ್ಟ್ 24ರಂದು ಬೆಳಗ್ಗೆ 9ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಡಿಕೆಶಿ ಬೆಳಗ್ಗೆ 11.30ಕ್ಕೆ ಗೋಕಾಕ್ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಮಧ್ಯಾಹ್ನ 1 ಗಂಟೆಗೆ ಅರಭಾಂವಿ ಮತಕ್ಷೇತ್ರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಘಟಪ್ರಭಾದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಸಲಿದ್ದಾರೆ.
ಸಂಜೆ 7.30ಕ್ಕೆ ಬೆಳಗಾವಿಗೆ ಆಗಮಿಸುವ ಡಿಕೆಶಿ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆಗಸ್ಟ್ 25ಕ್ಕೆ ಬೆಳಗಾವಿಯಿಂದ ಬಾಗಲಕೋಟಗೆ ಪ್ರವಾಸ ಬೆಳೆಸಲಿರುವುದಾಗಿ ತಿಳಿದುಬಂದಿದೆ.