ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಟಿಲ್ಲರ್ ಗೆ ರಾಷ್ಟ್ರ ದ್ವಜ ಹಾಕಿಕೊಂಡು ಪೂಜೆ ನೆರವೇರಿಸಿ ದೇಶಭಿಮಾನ ಮೆರೆದಿದ್ದಾರೆ. ಶಿಕಾರಿಪುರ ಪಟ್ಟಣ ಮಂಜುನಾಥ ಜಮೀನ್ದಾರ್ ಎಂಬ ಯುವಕ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗದ್ದೆಯಲ್ಲಿ ಟಿಲ್ಲರ್ ಗೆ ರಾಷ್ಟ್ರಧ್ವಜ ಹಾಕಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಗದ್ದೆಯಲ್ಲಿಯೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಪದವೀಧರನಾಗಿರುವ ಈ ಯುವಕ, 30 ಎಕರೆ ಜಮೀನಿನಲ್ಲಿ ಉಳುಮೆ ಕೈಗೊಂಡಿದ್ದಾರೆ. “ಕೃಷಿ ದೇಶದ ಮೂಲ ಆಧಾರ. ರೈತರ ಬಗ್ಗೆ ಮಾತನಾಡುವವರು ನೂರಾರು ಜನರಿದ್ದಾರೆ, ಅವರ ಕಷ್ಟ ನಷ್ಟಗಳು ಯಾರಿಗೂ ತಿಳಿದಿಲ್ಲ. ರೈತರಿದ್ದರೆ ಅನ್ನ, ಆಸ್ತಿ, ದೇಶದ ಆದಾಯ ಹೆಚ್ಚಾಗುತ್ತದೆ” ಎಂದು ಅಭಿಮಾನದ ಮಾತುಗಳನ್ನು ಆಡುತ್ತಾರೆ ಮಂಜುನಾಥ ಜಮೀನ್ದಾರ್. ಕೊರೊನಾ ಸಂಕಷ್ಟದಿಂದ ಸ್ವಾತಂತ್ರ್ಯ ದಿನಾಚರಣೆ ಕಳೆಗುಂದಿದ್ದು, ಹೊಲದಲ್ಲಿಯೇ ರೈತರು ಈ ರೀತಿ ಸ್ವಾತಂತ್ರ್ಯ ಸಂಭ್ರಮಾಚರಣೆ ಮಾಡಿರುವ ವಿಡಿಯೋ, ಫೋಟೊ ವೈರಲ್ ಆಗಿದೆ.