ಕೋವಿಡ್ ಸೋಂಕಿನಿಂದ ಮೃತಪಟ್ಟ ತಂದೆಯ ಶವವನ್ನು ಪಡೆಯಲು ನಿರಾಕರಿಸಿದ ಮಗ, ತಂದೆಯ ಹಣ ಬೇಕೆಂದು ಕೇಳಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು : ಕೋವಿಡ್ ಸೋಂಕಿನಿಂದ ಮೃತಪಟ್ಟ ತಂದೆಯ ಶವವನ್ನು ಪಡೆಯಲು ನಿರಾಕರಿಸಿದ ಮಗ, ತಂದೆಯ ಹಣ ಬೇಕೆಂದು ಕೇಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ತಂದೆಯ ಮನೆಯಲ್ಲಿ ಸಿಕ್ಕ ಸುಮಾರು 6 ಲಕ್ಷ ಹಣ, ಮೊಬೈಲ್ ಇತರೆ ವಸ್ತುಗಳನ್ನು ತಲುಪಿಸಿ ಎಂದು ಹೇಳುವ ಮೂಲಕ ಹಣಕ್ಕಷ್ಟೇ ಬೆಲೆ ಕಟ್ಟಿದ್ದಾನೆ. ಹೆಬ್ಬಾಳದಲ್ಲಿ ವ್ಯಕ್ತಿಯೊಬ್ಬರು ಕೊರೊನಾಗೆ ಬಲಿಯಾಗಿದ್ದರು. ಈ ಬಗ್ಗೆ ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಮೃತ ವ್ಯಕ್ತಿಯ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಆದರೆ ಕೊರೊನಾ ಸೋಂಕಿಗೆ ಬಲಿಯಾದ ತಂದೆಯ ಮೃತ ದೇಹ ಪಡೆಯಲು ಮಗ ನಿರಾಕರಿಸಿದ್ದಾನೆ. ನೀವೇ ಅಂತ್ಯಕ್ರಿಯೆ ಮಾಡಿ ಮುಗಿಸಿ ಎಂದು ಫೋನ್ ಮಾಡಿದ ಪಾಲಿಕೆ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ ಫೋನ್ ಮಾಡಿದಾಗಲೇ ಮನೆಯಲ್ಲಿ ಹಣ, ಎಟಿಎಂ ಕಾರ್ಡ್, 3 ಮೊಬೈಲ್ ಇರುವ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ಹಣ ಇದ್ದರೆ ಮನೆಗೆ ತಂದು ಕೊಡಿ. ಆದರೆ ಶವ ಮಾತ್ರ ತೆಗೆದುಕೊಳ್ಳುವುದಿಲ್ಲ ಎಂದು ಮಗ ಹೇಳಿದ್ದಾನೆ. ತಂದೆಯ ಶವ ಬೇಡ, ಆದರೆ ಅವರು ದುಡಿದ ಹಣ ಬೇಕು ಎನ್ನುವ ಮೂಲಕ ಜನ್ಮನೀಡಿದ ತಂದೆಗೇ ಅವಮಾನ ಮಾಡಿದ ಮಗನ ವಿರುದ್ಧಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.