ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿದ್ದ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ್ದ ರೈತ ಸಂಘದ ಕಾರ್ಯಕರ್ತರೊಬ್ಬರಿಗೆ, ಆಹಾರ ಸಚಿವ ಉಮೇಶ್ ಕತ್ತಿ ಅವರು ‘ಸತ್ತು ಹೋಗು’ ಎಂದು ಹೇಳಿ ಉಡಾಫೆಯಿಂದ ವರ್ತಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ರಾಜ್ಯದಲ್ಲಿ ಕೊರೊನಾ ತೀವ್ರ ರೀತಿಯಲ್ಲಿ ಹರಡುತ್ತಿದ್ದು, ರಾಜ್ಯ ಸರ್ಕಾರ ಈಗಾಗಲೆ ಲಾಕ್‌ಡೌನ್ ಹೇರಿದೆ. ಕಳೆದ ವರ್ಷ ಮಾಡಿದ ಲಾಕ್‌ಡೌನ್‌ನಿಂದಲೇ ಇನ್ನೂ ಚೇತರಿಸಿಕೊಳ್ಳದ ಜನರಿಗೆ ಮತ್ತೊಂದು ಲಾಕ್‌ಡೌನ್ ಹೇರಿರುವುದು ಆಹಾರದ ಪ್ರಶ್ನೆಯನ್ನೂ ತಂದೊಡ್ಡಿದೆ. ಈ ನಡುವೆ ರಾಜ್ಯ ಸರ್ಕಾರವು ಪಡಿತರ ವ್ಯವಸ್ಥೆಯಲ್ಲಿ ಸಿಗುತ್ತಿದ್ದ ಅಕ್ಕಿಯನ್ನು 2 ಕೆ.ಜಿ. ಗೆ ಇಳಿಸಿದೆ. ಇದನ್ನು ಪ್ರಶ್ನಿಸಿದ್ದ ಜನರೊಂದಿಗೆ ರಾಜ್ಯದ ಸಚಿವರು ಜವಾಬ್ದಾರಿ ಮರೆತು ವರ್ತಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ ಜಿಲ್ಲೆಯ ರೈತರ ಸಂಘದ ಕಾರ್ಯಕರ್ತರಾದ ಈಶ್ವರ್ ಎಂಬವರು ಸಚಿವ ಉಮೇಶ್ ಕತ್ತಿಗೆ ಕರೆ ಮಾಡಿ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಕಡಿತ ಮಾಡಿದ್ದರ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡುತ್ತೇವೆ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತದೆ. ಮೇ ತಿಂಗಳಿನಿಂದ ಈ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವೇಳೆ ಮತ್ತೆ ಪ್ರಶ್ನಿಸಿರುವ ರೈತ ಸಂಘದ ಕಾರ್ಯಕರ್ತ, ಮುಂದಿನ ತಿಂಗಳು ಎನ್ನುತ್ತೀರಿ, ಅಲ್ಲಿವರೆಗೂ ಉಪವಾಸ ಇರುವುದಾ, ಸತ್ತೋಗುವುದಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉದ್ದಟತನದಿಂದ ಉತ್ತರಿಸಿದ ಸಚಿವರು, “ಸತ್ತು ಹೋಗು ಒಳ್ಳೆಯದು, ಮೊದಲು ಅಕ್ಕಿ ಮಾರಾಟ ಮಾಡಿವ ದಂಧೆ ನಿಲ್ಲಿಸಿ. ಫೋನ್ ಮಾಡಬೇಡಿ” ಎಂದು ಹೇಳಿದ್ದಾರೆ.
ಅಷ್ಟೆ ಅಲ್ಲದೆ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದ ಮಾಧ್ಯಮದ ಜೊತೆಗೆ ತಾನಾಡಿದ ಮಾತನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ. “ಅಕ್ಕಿ ಕಡಿತ ಮಾಡಿದ್ದಾರೆ ಸಾಯಬೇಕೋ ಅಂತಾ ಕೇಳಿದ, ಸತ್ತು ಹೋಗಪ್ಪಾ ಅಂದೆ. ಅವನು ಸಾಯ್ತೀನಿ ಅಂದ್ರೆ ನಾನೇನು ಉತ್ತರ ಕೊಡಲಿ” ಎಂದು ಪ್ರಶ್ನಿಸಿದ್ದಾರೆ.
ಸಾಯಬೇಡವೆಂದು ಸಮಾಧಾನ ಹೇಳಿ ದೈರ್ಯ ತುಂಬುವುದು ಜನಪ್ರತಿನಿಧಿಯೊಬ್ಬರ ಕರ್ತವ್ಯ ಅಲ್ಲವೆ ಎಂದು ಮಾಧ್ಯಮದವರ ಮತ್ತೊಂದು ಪ್ರಶ್ನೆಗೆ ಕೂಡಾ ಅವರು, “ನಾನು ಅಷ್ಟು ದೊಡ್ಡ ಮನುಷ್ಯ ಅಲ್ಲ. ಏಪ್ರಿಲ್ ತಿಂಗಳಲ್ಲಿ ಬಂದಿದೆ, ಮೇ ತಿಂಗಳಲ್ಲಿ ನೋಡೋಣ ಅಂತ ಹೇಳಿದ್ದೇನೆ. ಆರೂವರೆ ಕೋಟಿ ಜನರಿಗೆ ಉತ್ತರ ಕೊಡುತ್ತಾ ಎಲ್ಲಿ ಹೋಗಲಿ. ಸತ್ತು ಹೋಗಲಾ ಎಂದರೆ ನಾನೇನು ಉತ್ತರಿಸಲಿ?” ಎಂದು ಮತ್ತೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.