ಇಳಕಲ್: ನಗರದ ಜನತೆ ಗದಗ-ನರೇಗಲ್- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗದ ಬಗ್ಗೆ ಬಲವಾಗಿ ಹಕ್ಕೊತ್ತಾಯ ಮಾಡಬೇಕಾಗಿದೆ ಎಂದು ಹಿರಿಯ ಉದ್ಯಮಿ ವಿರೇಶ ಸೊನ್ನದ ಅವರು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಇಳಕಲ್ಲಿನಲ್ಲಿ ನಡೆದ “ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ” ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಳಕಲ್ ನಗರ ಎಷ್ಟೋ ವರ್ಷಗಳ ಹಿಂದೆಯೇ ದೊಡ್ಡ ಜಂಕ್ಷನ್ ಆಗಬೇಕಾಗಿತ್ತು. ಪ್ರಮುಖ ಯೋಜನೆಗಳನ್ನು ಜನ ಪ್ರತಿನಿಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿರುವುದರಿಂದ ಇಳಕಲ್ ನಗರ ಅತಿ ಮಹತ್ವದ ರೈಲ್ವೆ ಯೋಜನೆಗಳಿಂದ ವಂಚಿತವಾಗಿದೆ. ಈ ಬಗ್ಗೆ ಇಳಕಲ್ ಜನ ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯತೆಯಿದೆ ಎಂದೂ ಹೇಳಿದರು.
ನಮ್ಮ ಸಂಸದರ ನಿರ್ಲಕ್ಷ್ಯದಿಂದ ನ್ಯಾಯ ಸಮ್ಮತವಾಗಿ ಆಗಲೇಬೇಕಾಗಿದ್ದ ಮೂಲ ಯೋಜನೆಗಳಿಂದ ಇಂದು ನಾವೆಲ್ಲಾ ವಂಚಿತರಾಗಿದ್ದೇವೆ. ರಾಜಕಾರಣಿಗಳ ಬಣ್ಣದ ಮಾತಿಗೆ ಮರುಳಾಗದೇ ಕೈತಪ್ಪಿ ಹೋಗಿರುವ ಯೋಜನೆಯನ್ನು ಮರಳಿ ಪಡೆಯಲು ಕಾನೂನಾತ್ಮಕ ಹೋರಾಟ ನಡೆಸಲು ಮುಂದಾಗಬೇಕು ಎಂದು ಸೊನ್ನದ ಅವರು ತಿಳಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿನ ರೈಲ್ವೆ ಯೋಜನೆಗಳಿಗಾಗಿ ದಶಕಗಳಿಂದ ಹೋರಾಟ ನಡೆಸಿರುವ ಗದಗ- ಇಳಕಲ್- ವಾಡಿರೈಲ್ವೆ ಹೋರಾಟ ಸಮಿತಿ ಅಧ್ಯಕ್ಷರಾದ ಕಾಂತಿಲಾಲ ಜೈನ ಅವರು, ಬ್ರಿಟಿಷರು- ಹೈದರಾಬಾದ್ ನವಾಬರ ಆಡಳಿತದಲ್ಲಿ ಗದಗ- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗ ಯೋಜನೆ ಸಿದ್ಧವಾಗಿತ್ತು. ಸದರಿ ಯೋಜನೆಯನ್ನು ಬದಲಾವಣೆ ಮಾಡಿ ಗಜೇಂದ್ರಡ, ಇಳಕಲ್ ಮಾರ್ಗಗಳನ್ನು ಕೈಬಿಟ್ಟು ಯೋಜನೆಯನ್ನು ಕೈಗೊಳ್ಳಲಾಗಿದೆ.
ಇದಕ್ಕೆ ಯಾರು ಹೊಣೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಂಸದರು, ಜನ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ನಾವೆಲ್ಲಾ ರೈಲ್ವೆ ಯೋಜನೆಗಳಿಂದ ವಂಚಿತರಾಗಿದ್ದೇವೆ. ನ್ಯಾಯಸಮ್ಮತ ಯೋಜನೆಗಳನ್ನು ಪಡೆದುಕೊಳ್ಳಲು ನಾವೆಲ್ಲಾ ಒಗ್ಗಟ್ಟಿನ ಫಲಿತಾಂಶ ಆಧಾರಿತ ಹೋರಾಟಕ್ಕೆ ಸಿದ್ಧರಾಗಲೇಬೇಕು ಎಂದು ಜೈನ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮನೋಜಕುಮಾರ ಬಡಿಗೇರ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳಲ್ಲಿ ಯೋಜನೆಯ ವಿವರಗಳನ್ನು ನೀಡಿದರು. ಸಭೆಯಲ್ಲಿ ಹೋರಾಟ ಸಮಿತಿಯ ಗಣೇಶಸಿಂಗ್ ಬ್ಯಾಳಿ, ಅಶೋಕ ಬೇವಿನಕಟ್ಟಿ, ಬಸವರಾಜ ವಂಕಲಕುಂಟಿ, ಶಿವಾನಂದ ಬಡಿಗೇರ, ಎಮ್.ಆರ್. ಪಾಟೀಲ ಮಾತನಾಡಿದರು. ಸಿ. ಸಿ. ಚಂದ್ರಾಪಟ್ಟಣ, ಸಿರಾಜ್ ಖಾಜಿ, ಕಾಸೀಮಸಾ ಕಂದಗಲ್, ಸಂಧ್ಯಾ ಗುಂಡಿ, ವಿಲಿಯಂ ಗುಂಡೀಗೆರಿ, ದಾವಲಸಾಬ ಮೋಮಿನ ಮತ್ತಿತರರು ಸಭೆಯಲ್ಲಿದ್ದರು. ಜಗದೀಶ ಸರಾಫ ವಂದನಾರ್ಪಣೆ ಮಾಡಿದರು.