ಬಾಗಲಕೋಟೆ: ನಿರಂತರ ಮಳೆಗೆ ಘಟಪ್ರಭಾ ನದಿ ನೀರು ಏರಿಕೆಯಾಗಿದೆ. ಇದರ ಪರಿಣಾಮ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥನಾದ ಸುತ್ತ ನೀರು ಆವರಿಸಿದೆ.

ಕಳೆದ ವರ್ಷ ಪ್ರವಾಹದ ವೇಳೆ ಈ ದೇವಸ್ಥಾನ ಸಂಪೂರ್ಣ ಜಲಾವೃತವಾದ್ದು, ಈಗ ಇದೇ ರೀತಿ ನದಿ ನೀರು ಹೆಚ್ಚಾದರೆ ಮತ್ತೆ ದೇವಸ್ಧಾನ ಜಲಾವೃತವಾಗುವ ಸಾಧ್ಯತೆ ಇದೆ. ನಿರಂತರ ಮಳೆಯಿಂದಾಗಿ ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಏರಿಕೆ ಯಾಗಿದೆ. 24 ಗಂಟೆಯಲ್ಲಿ 42 ಸಾವಿರ ಕ್ಯೂಸೆಕ್ ನೀರು ಸಂಗ್ರಹವಾಗಿದ್ದು, ಒಂದೇ ದಿನದಲ್ಲಿ 4 ಟಿಎಂಸಿ ನೀರು ಸಂಗ್ರಹವಾಗಿದೆ.

ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ- 2079.50 ಅಡಿ
ಇಂದಿನಿ ಮಟ್ಟ- 2066.70 ಅಡಿ
ಒಳ ಹರಿವು- 48,821 ಕ್ಯೂಸೆಕ್
ಹೊರ ಹೊರಿವು- 164 ಕ್ಯೂಸೆಕ್
ಇಂದಿನ ಸಂಗ್ರಹ- 22.514 ಟಿಎಂಸಿ
ಜಲಾಶಯ ಸಾಮರ್ಥ್ಯ- 37.731 ಟಿಎಂಸಿ ಇದೆ.

ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹಿಡಕಲ್ ಜಲಾಶಯ ಹಾಗೂ ದೂಪದಾಳ ಡ್ಯಾಮ್ನಿಂದ ಘಟಪ್ರಭಾ ನದಿಗೆ ನೀರು ಹರಿದುಬರುತ್ತಿದೆ. ತುಂಬಿಹರಿಯುತ್ತಿರುವ ಘಟಪ್ರಭೆಯಿಂದ ಮಿರ್ಜಿ-ಮಹಲಿಂಗಪುರದ ಹಳೆಯ ರಸ್ತೆ, ಸೇತುವೆ ಜಲಾವೃತ ವಾಗಿವೆ. ಮಿರ್ಜಿ, ಚನಾಳ, ಮಲ್ಲಾಪುರ ಒಂಟಗೋಡ ಗ್ರಾಮಗಳಿಂದ ಮಹಲಿಂಗಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ರಸ್ತೆ ಸೇತುವೆ ಮೇಲೆ ಸುಮಾರು ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದೆ.