ಹುನಗುಂದ : ತಾಲೂಕಿನಲ್ಲಿ ಒಂದು ವಾರದಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ತಮ್ಮ ದೈನಂದಿನ ಕೆಲಸ ಬಿಟ್ಟು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ.
ಸತತ ಮಳೆ ನಂತರ ಬೆಳೆಗಳಿಗೆ ತತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕಿದೆ. ಈ ಕಾರಣಕ್ಕೆ ರೈತರು ಗೊಬ್ಬರ ಪಡೆಯಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಕಳೆದು ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ಸರತಿ ನಿಲ್ಲುತ್ತಿರುವ ರೈತರು, ಗೊಬ್ಬರ ಬಾರದೆ ನಿರಾಸೆಯಿಂದ ಮನೆಗೆ ವಾಪಸ್ ಹೋಗಿರುವ ಘಟನೆ ನಡೆದಿದೆ.
ರೈತರು ಸರದಿಯಲ್ಲಿ ನಿಂತು ಮೊದಲು ಬಂದವರು ತಲಾ 4 ಚೀಲ ಪಡೆದುಕೊಂಡರು. ನಂತರ ಬಂದವರು ಮತ್ತೂ ಬರೀಗೈಯ್ಯಲ್ಲಿ ವಾಪಸಾದರು.
ಕಳೆದ ಎರಡು ವಾರದಲ್ಲಿ ಸತತ ಮಳೆ ಕಾರಣಕ್ಕೆ ಕೃಷಿ ಭೂಮಿಯಲ್ಲಿನ ಪೋಷಕಾಂಶ ಹರಿದು ಹೋಗಿದೆ. ಪ್ರಮುಖವಾಗಿ ಮೆಕ್ಕೆಜೋಳ, ಶುಂಠಿ ಮತ್ತಿತರೆ ಬೆಳೆಗಳು ಸತ್ವಹೀನವಾಗಿವೆ. ರೈತರು ತ್ವರಿತವಾಗಿ ಮತ್ತೊಂದು ಸುತ್ತಿನ ಯೂರಿಯಾ ಗೊಬ್ಬರ ಬೆಳೆಗೆ ನೀಡುವುದು ಅಗತ್ಯವಾಗಿದೆ. ಹಾಗಾಗಿ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುತ್ತಿಲ್ಲ.
ರಸಗೊಬ್ಬರ ಅಭಾವ ಉಂಟಾಗಿ ಈಗಾಗಲೆ 15 ದಿನವಾಗಿದೆ. ಆದರೂ ಪೂರೈಕೆ ಆಗುತ್ತಿಲ್ಲ. ಸೂಕ್ತ ಸಮಯಕ್ಕೆ ಗೊಬ್ಬರ ನೀಡದಿದ್ದರೆ ಬೆಳೆ ಇಳುವರಿ ಬರುವುದಿಲ್ಲ ಎನ್ನುವ ಆತಂಕ ರೈತರದ್ದಾಗಿದೆ. ಸರಕಾರ ಕೂಡಲೇ ಅಗತ್ಯವಿರುವ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರು ಹಾಗೂ ತಾಲ್ಲೂಕು ಅಧ್ಯಕ್ಷ ರಂಜಾನ್ ನದಾಫ್,ವೀರಣ್ಣ ಬಡಿಗೇರ,ಶರಣಪ್ಪ ಗಾಣಿಗೇರ ಜಗದೇಶ ಬಸರಿಗಿಡದ,ಚಂದ್ರು ಹುನಗುಂದ, ರೋಹಿತ್ ಬಾರಕೇರ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ನೀಡಿದರು.
ಕರವೇ ಕಾರ್ಯಕರ್ತರಾದ ಶರಣು ಕುರಿ ,ಶ್ರೀನಿವಾಸ ಮೇಟಿ,ಸಂಗಮೇಶ ಬೆವೂರು, ಸುರೇಶ ನಾಯಕ, ಮುಂತಾದವರು ಪಾಲ್ಗೊಂಡಿದ್ದರು.