ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಉಂಟಾದ ಗಲಭೆ ತಡರಾತ್ರಿ 2ರ ಸುಮಾರಿಗೆ ನಿಯಂತ್ರಣಕ್ಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಸಹ ಜಾರಿ ಮಾಡಲಾಗಿದೆ.
ಈ ಸಂಬಂಧ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಗುಂಪು ಸೇರಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ: ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಗಲಭೆ ಕೋರರನ್ನು ಬಂಧಿಸಲಾಗುತ್ತಿದೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಮಲ್ ಪಂಥ್ ಹೇಳಿದ್ದಾರೆ .
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು ಹಲವರು ಗಾಯಗೊಂಡಿದ್ದಾರೆ. ಈಗ ಸ್ಥಿತಿ ನಿಯಂತ್ರಣಕ್ಕೆ ಬಂದಿದೆ’ ಎಂದು ತಿಳಿಸಿದ್ದಾರೆ.
ಉದ್ರಿಕ್ತರು ಪೊಲೀಸರ ಮೇಲೆ ಹಲ್ಲೆ ಎಸಗಿದ್ದು, ಕಲ್ಲು ತೂರಾಟದಿಂದಾಗಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡೇಟಿನಿಂದ ಒಬ್ಬ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ಗಾಯಾಳುಗಳ ಪರಿಸ್ಥಿತಿ ಬೆಳಿಗ್ಗೆ ಗೊತ್ತಾಗಲಿದೆ ಎಂದು ಹೇಳಿದರು.
ಗಲಭೆ: 30 ಮಂದಿಯನ್ನು ಬಂಧಿಸಿದ ಸಿಸಿಬಿ
ಬೆಂಗಳೂರು; ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸಂಬಂಧ 30 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗಲಭೆ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸಿಸಿಬಿ ವಹಿಸಲಾಗಿದೆ. ಸಿಸಿಬಿಯ ವಿಶೇಷ ತಂಡಗಳು, ಮಂಗಳವಾರ ರಾತ್ರಿಯೀಡಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.
‘ಸದ್ಯಕ್ಕೆ 30 ಮಂದಿಯನ್ನು ಬಂಧಿಸಲಾಗಿದೆ. ಬಂಧನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮತ್ತಷ್ಟು ಮಂದಿಯನ್ನು ಬಂಧಿಸಬೇಕಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ದೇವಸ್ಥಾನಕ್ಕೆ ಕಾವಲಾದ ಯುವಕರು
ಬೆಂಗಳೂರು: ಡಿ.ಜೆ.ಹಳ್ಳಿ, ಕಾವಲ್ ಭೈರಸಂದ್ರದಲ್ಲಿ ಗಲಭೆ ನಡೆಯುತ್ತಿರುವಾಗಲೇ ಕೆಲ ಯುವಕರು, ದೇವಸ್ಥಾನಕ್ಕೆ ಕಾವಲಾಗಿ ನಿಂತು ಆ ಸ್ಥಳದಲ್ಲಿ ಯಾವುದೇ ಗಲಾಟೆ ಆಗದಂತೆ ನೋಡಿಕೊಂಡರು. ಉದ್ರಿಕ್ತರು ಗುಂಪು ಗುಂಪಾಗಿ ಸೇರುತ್ತ ಗಲಾಟೆ ಮಾಡುತ್ತಿದ್ದರು.
ರಸ್ತೆಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದರು. ಇದೇ ಸಂದರ್ಭದಲ್ಲಿ ಕೆಲ ಯುವಕರು, ದೇವಸ್ಥಾನದ ಹೊರಭಾಗದಲ್ಲಿ ನಿಂತು ಮಾನವ ಸರಪಳಿ ನಿರ್ಮಿಸಿ ಕಾವಲಾದರು. ದೇವಸ್ಥಾನ ಬಳಿ ಬಂದ ಕೆಲ ಕಿಡಿಗೇಡಿಗಳನ್ನು ಬೆದರಿಸಿ ಸ್ಥಳದಿಂದ ವಾಪಸು ಕಳುಹಿಸಿದರು.