ಸಾರ್ವಜನಿಕ ಸ್ಥಳಗಳಲ್ಲಿ ಏಕಾಂಗಿಯಾಗಿ ವಾಹನಗಳಲ್ಲಿ ಓಡಾಡುವವರು ಕೂಡಾ ಕೊರೊನಾ ನಿಯಮಗಳನ್ನು ಪಾಲಿಸಿ ಮಾಸ್ಕ್ ಧರಿಸಬೇಕು ಎಂದು ದೆಹಲಿ ಹೈಕೋಟ್ ಬುಧವಾರ ಹೇಳಿದೆ. ಏಕಾಂಗಿಯಾಗಿ ವಾಹನ ಚಲಾಯಿಸುತ್ತಿರುವಾಗ ಮಾಸ್ಕ್ ಧರಿಸದಿದ್ದಕ್ಕಾಗಿ ದಂಡ ಹಾಕಿದ್ದನ್ನು ಪ್ರಶ್ನಿಸಿದ್ದ ಅರ್ಜಿದಾರರೊಬ್ಬರ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಪ್ರತಿಭಾ ಎಂ. ಸಿಂಗ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
“ನೀವು ಕಾರಿನಲ್ಲಿ ಏಕಾಂಗಿಯಾಗಿದ್ದರೂ, ಮಾಸ್ಕ್ ಧರಿಸಲು ಏಕೆ ಆಕ್ಷೇಪಿಸುತ್ತೀರಿ? ಇದು ನಿಮ್ಮ ಸ್ವಂತ ಸುರಕ್ಷತೆಗಾಗಿ. ಸಾಂಕ್ರಾಮಿಕ ಬಿಕ್ಕಟ್ಟು ಹೆಚ್ಚಾಗಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಲಾಗಿದೆಯೋ ಇಲ್ಲವೋ, ಆದರೆ ಮಾಸ್ಕ್ ಧರಿಸಬೇಕು” ಎಂದು ನ್ಯಾಯಾಮೂರ್ತಿ ಹೇಳಿದ್ದಾರೆ.
ವಿಶ್ವಾದ್ಯಂತ ವಿಜ್ಞಾನಿಗಳು ಮತ್ತು ಸರ್ಕಾರಗಳ ಸಲಹೆಯನ್ನು ಉಲ್ಲೇಖಿಸಿ ಕೊರೊನಾ ವಿರುದ್ಧ ಸುರಕ್ಷಿತವಾಗಿರಲು ಯಾರಾದರೂ ಮಾಡಬಹುದಾದ ಕನಿಷ್ಠ ಕೆಲಸ ಇದಾಗಿದೆ. ಕೊರೊನಾ ವೈರಸ್ ಎಷ್ಟು ಸಾಂಕ್ರಾಮಿಕವಾಗಿದೆಯೆಂದರೆ, ಟ್ರಾಫಿಕ್ ಸಮಯದಲ್ಲೂ ಸೋಂಕಿಗೆ ಒಳಗಾಗಬಹುದು ಎಂದು ಅವರು ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಹೈಕೋರ್ಟ್‌ಗೆ ಏಕಾಂಗಿ ಚಾಲಕ ಮಾಸ್ಕ್ ಧರಿಸಬೇಕೆಂಬ ನಿಯಮವಿಲ್ಲ ಎಂದು ತಿಳಿಸಿತ್ತು. ಆದರೆ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ನಿಯಮಗಳನ್ನು ರೂಪಿಸುವ ಮತ್ತು ಅವುಗಳನ್ನು ಜಾರಿಗೊಳಿಸುವ ಹಕ್ಕಿದೆ ಎಂದು ಸಚಿವಾಲಯ ಪ್ರತಿಪಾದಿಸಿತ್ತು.
ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಖಾಸಗಿ ಅಥವಾ ಸಾರ್ವಜನಿಕ ವಾಹನಗಳಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಕಳೆದ ವರ್ಷ ಏಪ್ರಿಲ್‌ನಲ್ಲಿ ಆದೇಶವನ್ನು ಅಂಗೀಕರಿಸಿತ್ತು.