ಪ್ರಧಾನಿ ಮೋದಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನನ್ನು ಸೋಮವಾರ (ಇಂದು) ರಾಜ್ಯಸಭೆಯಲ್ಲಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಇತ್ತು, ಎಂಎಸ್‌ಪಿ ಇದೆ ಮತ್ತು ಎಂಎಸ್‌ಪಿ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ರೈತರ ಹೋರಾಟಕ್ಕೆ ಜಾಗತಿಕ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಉಲ್ಲೇಖಿಸಿರುವ ಮೋದಿ, ಅದನ್ನು ’ವಿದೇಶಿ ವಿನಾಶಕಾರಿ ಸಿದ್ದಾಂತ’ ಎಂದು ಹೇಳಿದ್ದು, “ಈ ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ ದೇಶವನ್ನು ಉಳಿಸಬೇಕಾಗಿದೆ” ಎಂದಿದ್ದಾರೆ.
“ಕೆಲವರು ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಏನಾಯಿತು ಎಂಬುದನ್ನು ನಾವು ಮರೆಯಬಾರದು. 1984 ರಲ್ಲಿ ಪಂಜಾಬ್ ಹೆಚ್ಚು ಸಂಕಷ್ಟಕ್ಕೊಳಗಾಯಿತು. ಜಮ್ಮು ಕಾಶ್ಮೀರ, ಈಶಾನ್ಯವು ಭಾರತವು ಕಷ್ಟಕ್ಕೊಳಗಾಯಿತು. ಸಿಖ್ಖರನ್ನು ದಾರಿ ತಪ್ಪಿಸಲಾಗುತ್ತಿದೆ” ಎಂದು ರೈತರ ಪ್ರತಿಭಟನೆಗೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಬೆಂಬಲವನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದ್ದಾರೆ.
“ತಮ್ಮ ಸರ್ಕಾರ ಸಣ್ಣ ರೈತರಿಗಾಗಿ ಕೆಲಸ ಮಾಡುತ್ತಿದೆ ಎಂದು ಪುನರುಚ್ಚರಿಸಿದ ಅವರು, 2014 ರಿಂದ ರೈತನನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಸರ್ಕಾರ ಪ್ರಾರಂಭಿಸಿದೆ” ಎಂದು ಹೇಳಿದ್ದಾರೆ.