ಬೆಂಗಳೂರು:- ಕರ್ನಾಟಕ ಬಂದ್ ನಡೆದ ದಿನವೇ ಪೊಲೀಸರ ದಾಳಿಯಿಂದ ಸ್ಥಗಿತಗೊಂಡಿದ್ದ ಪ್ರಾದೇಶಿಕ ಸುದ್ದಿ ವಾಹಿನಿ-ಪವರ್ ಟಿವಿ ಕಾರ್ಯಾರಂಭ ಮಾಡಲಿಲ್ಲ. ಸೋಮವಾರ ಸಂಜೆ ಸುದ್ದಿಯನ್ನು ಭಿತ್ತಿರಿಸುತ್ತಿದ್ದ ವಾಹಿನಿಯನ್ನು ಹಾಗೂ ಅದರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಏಕಕಾಲಕ್ಕೆ ಸ್ಥಗಿತಗೊಳಿಸಲಾಗಿದೆ.
ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಕುರಿತಾದ ಹಗರಣದ ಸುದ್ದಿಯನ್ನು ಪವರ್ ಟಿವಿ ಎರಡು ತಿಂಗಳ ಹಿಂದೆಯೇ ಪ್ರಸಾರ ಮಾಡುವ ಸುಳಿವು ನೀಡಿತ್ತು. ಆದರೆ, ಡ್ರಗ್ ಪತ್ತೆ ಪ್ರಕರಣ ಹಾಗೂ ಅದಕ್ಕೆ ಸ್ಯಾಂಡಲ್‌ವುಡ್ ತಳಕು ಹಾಕಿಕೊಂಡಿದ್ದರಿಂದ ಅಲ್ಪ ವಿರಾಮವಾಗಿತ್ತು. ಅವೆಲ್ಲಾ ಮುಗಿದ ನಂತರ ಪವರ್ ಟಿವಿ ಮತ್ತೆ ಸಿಎಂ ಪುತ್ರ ವಿಜಯೇಂದ್ರ ಬಗೆಗಿನ ಸುದ್ದಿ ಪ್ರಸಾರ ಆರಂಭಿಸಿತ್ತು, ವಾಹಿನಿಯ ಮೇಲೆ ಹಾಗೂ ಅಲ್ಲಿ ಕೆಲಸ ಮಾಡುವ ಪತ್ರಕರ್ತರ ರೆಹಮಾನ್ ಸೇರಿದಂತೆ ಹಲವರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಮುಂದುವರಿದ ಭಾಗವಾಗಿ ಈಗ ವಾಹಿನಿ ಪ್ರಸಾರ ಸ್ಥಗಿತಗೊಂಡಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಪ್ರಸಾರಕ್ಕೆ ಕುತ್ತು ತಂದಿರುವುದಕ್ಕೆ ಕಾರಣವಾದರ ಮೇಲೆ ಭಾರಿ ವಿರೋಧಕ್ಕೆ ಕಾರಣವಾಗಿದೆ.
ಪವರ್ ಟಿವಿಯ ಸರ್ವರ್ ಸಿಸ್ಟಂನ್ನು ಹಿಂತಿರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಸೂಚಿಸಿದ್ದಾರೆ ಎಂದು ಪಕ್ಷದ ಮೂಲ ತಿಳಿಸಿದೆ.
ವಿಷಯ ಏನೇ ಇದ್ದರೂ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳೋಣ. ಚಾನಲ್ ಪ್ರಸಾರಕ್ಕೆ ಅಡ್ಡಿ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಪವರ್ ಟಿವಿ ಮಾಲೀಕರ ಮೇಲೆ ಆರೋಪ ಬೇರೆ ವಿಚಾರ, ಅವರ ಮೇಲೆ ತನಿಖೆ ನಡೆಸುವುದಕ್ಕೆ ಸಂಘದ ಅಭ್ಯಂತರವಿಲ್ಲ. ಆದರೆ, ಒಂದು ಟಿವಿ ವಾಹಿನಿ ನೇರ ಪ್ರಸಾರವನ್ನು ಸ್ಥಗಿತ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ತಾವು ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ, ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಕಾ.ನಿ.ಪ. ಅಧ್ಯಕ್ಷ ಶಿವಾನಂದ ತಗಡೂರು ಅವರು ಮನವಿ ಪತ್ರ ಸಲ್ಲಿಸಿದ್ದಾರೆ.
ಸಿಸಿಬಿನ ಪೊಲೀಸರು ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಸಂಪರ್ಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಅವರು ಸಿಗದೇ ಇದ್ದಾಗ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮತ್ತಿಕೆರೆ ರಸ್ತೆಯಲ್ಲಿರುವ ಪವರ್ ಟಿವಿ ಸುದ್ದಿ ವಾಹಿನಿಯ ಕಚೇರಿಯಲ್ಲಿ ತಪಾಸಣೆ ನಡೆಸಿದ್ದರು.
ಲಂಚದ ಆರೋಪ ಮಾಡಿದ್ದ ಕಾಂಗ್ರೆಸ್:
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಮೇಲೆ ಲಂಚದ ಆರೋಪ ಮಾಡಿದ್ದರು.
ಸಿಎಂ ಪುತ್ರ ವಿಜಯೇಂದ್ರ ಅವರು ರಾಮಲಿಂಗಂ ಕಂಪನಿ ಟೆಂಡರ್ ರದ್ದು ಮಾಡುವ ಬೆದರಿಕೆ ಹಾಕುವ ಮೂಲಕ ಅವರಿಂದ ಒತ್ತಡ ಹಾಕಿ ಹಣವನ್ನು ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅಡಿಯೊ ಕ್ಲಿಪಿಂಗ್, ವಾಟ್ಸಪ್ ದಾಖಲೆ ಬ್ಯಾಂಕ್ ಅಕೌಂಟ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಸಿಸಿಬಿ ಪೊಲೀಸರು ಪವರ್ ಟಿವಿ ನೇರ ಪ್ರಸಾರ ಸ್ಥಗಿತಗೊಳಿಸಿದ ಬಳಿಕ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ್ದ ಪ್ರಧಾನ ಸಂಪಾದಕ ರಹಮಾನ್ ಹಸೀಬ್ ಅವರು, ಕಂಪನಿಯ ಎಂಡಿ ರಾಕೇಶ್ ಶೆಟ್ಟಿ ಅವರ ತಪ್ಪಿದ್ದರೆ ಯಾವುದೇ ಕ್ರಮಕೈಗೊಳ್ಳಿ. ಆದರೆ ಚಾನಲ್ ನೇರ ಪ್ರಸಾರವನ್ನು ನಿಲ್ಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು.
ನೇರ ಪ್ರಸಾರ ಸ್ಥಗಿತಕ್ಕೆ ಆಕ್ರೋಶ!!.
ವರದಿ ಪ್ರಸಾರವೊಂದಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದನ್ನು ಸ್ಥಗಿತಗೊಳಿಸಿದ್ದು ರಾಜ್ಯದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ಹೀಗಾಗಿ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿಯೂ ಭಾರಿ ಚರ್ಚೆಗೆ ಮುನ್ನುಡಿಯಾಗಿದೆ. ಕಾನೂನು ಹೋರಾಟದ ಹೊರತಾಗಿ ಮಾಧ್ಯಮವೊಂದರ ನೇರ ಪ್ರಸಾರವನ್ನು ಸ್ಥಗಿತಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ಪವರ್ ಟಿವಿಯ ನೇರ ಪ್ರಸಾರ ಸ್ಥಗಿತವಾಗಿ 24 ಗಂಟೆಗಳು ಕಳದಿವೆ ಎಂದು ಪವರ್ ಟಿವಿಯ ಸಿಬ್ಬಂದಿ ಆರೋಪಿಸಿದ್ದಾರೆ. ಸರ್ಕಾರದ ಈ ನಡೆಯಿಂದಾಗಿ ನಾವೆಲ್ಲರೂ (ಸುಮಾರು 250 ಸಿಬ್ಬಂದಿ) ಬೀದಿಗೆ ಬಿದ್ದಿದ್ದೇವೆ ಎಂದು ಪ್ರಧಾನ ಸಂಪಾದಕ ರಹಮಾನ್ ಹಾಸನ್ ಆರೋಪಿಸಿದ್ದರು. ಈಗ ಬಹುತೇಕ ಎಲ್ಲ ಸಿಬ್ಬಂದಿಯ ಸ್ಥಿತಿಯೂ ಇದೇ ಆಗಿದೆ ಎಂದು ಪವರ್ ಟಿವಿಯ ಹಿರಿಯ ವರದಿಗಾರರೊಬ್ಬರು ಆರೋಪಮಾಡಿದ್ದಾರೆ.