ಡೆಹ್ರಾಡೂನ್, ಆ. 18: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಹೇಶ್ ನೇಗಿ ನನ್ನ ಮಗುವಿನ ತಂದೆ, ಅನುಮಾನವಿದ್ದರೆ ಡಿಎನ್ಎ ಪರೀಕ್ಷೆ ಮಾಡಿಸಿ ಎಂದು ಆಕೆ ಸವಾಲು ಹಾಕಿದ್ದಾರೆ.
ಇದಕ್ಕೆ ಪ್ರತಿಯಾಗಿ ಶಾಸಕರ ಪತ್ನಿ ಕೂಡ ನೆಹರು ಕಾಲನಿ ಪೊಲೀಸ್ ಠಾಣೆಯಲ್ಲಿ ಆ ಮಹಿಳೆ ವಿರುದ್ಧ ಬ್ಲ್ಯಾಕ್ಮೇಲ್ ಮಾಡುತ್ತಿರುವ ಆರೋಪ ಹೊರೆಸಿ ದೂರು ನೀಡಿರುವ ಘಟನೆ ನಡೆದಿದೆ.
2016 ಮತ್ತು 2018ರ ನಡುವೆ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ನೆಹರೂ ಕಾಲನಿಯಲ್ಲಿ ದ್ವಾರಹತ್ ಶಾಸಕ ಮಹೇಶ್ ನೇಗಿ ವಿರುದ್ಧ ದೂರು ನೀಡಿದ್ದಾರೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಶಾಸಕರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಮಹೇಶ್ ನೇಗಿ ಅವರು ನನ್ನ ನೆರೆಮನೆಯವರಾಗಿದ್ದು, ಪರಿಚಯವಿತ್ತು. 2016ರಲ್ಲಿ ಒಮ್ಮೆ ನನ್ನ ತಾಯಿಗೆ ಹುಷಾರಿಲ್ಲವೆಂದು ನೆರವು ಕೋರಿದ್ದೆ. ಹೀಗೆ ಆದ ಪರಿಚಯದ ಲಾಭ ಪಡೆದು ನನ್ನನ್ನು ಅನೇಕ ಕಡೆ ಪ್ರವಾಸಕ್ಕೆ ಕರೆದೊಯ್ದರು.null
2016 ಮತ್ತು 2018ರ ನಡುವೆ ನೇಗಿ ಮುಸ್ಸೋರಿ, ನೈನಿತಾಲ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳ ಮುಂತಾದೆಡೆ ಪ್ರವಾಸ ಕೈಗೊಂಡೆವು. ಈ ಅವಧಿಯಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಮ್ಮ ಸಂಬಂಧದ ವಿಷ್ಯ ತನ್ನ ಪತ್ನಿಗೆ ತಿಳಿಯಬಾರದು ಎಂದು ನನಗೆ 25 ಲಕ್ಷ ದುಡ್ಡು ಕೊಡುವುದಾಗಿ ಆಮಿಷವೊಡ್ಡಿದ್ದರು. ಆದರೆ ನಾನು ದುಡ್ಡು ಪಡೆದಿರಲಿಲ್ಲ ಎಂದು ದೂರಿನಲ್ಲಿ ಮಹಿಳೆ ಬರೆದುಕೊಂಡಿದ್ದಾರೆ. ಈ ಬಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪ್ರೀತಂ ಸಿಂಗ್, ಆ ಮಹಿಳೆ ದೂರಿನಲ್ಲಿ ಕೇಳಿಕೊಂಡಿರುವಂತೆ ಡಿಎನ್ಎ ಪರೀಕ್ಷೆ ನಡೆಸಿ, ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.(ಪಿಟಿಐ)