ಭಾರತದ ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವ ಅಂತರ್‌ರಾಜ್ಯ ಪ್ರಯಾಣಿಕರು ಕೊರೊನಾ ನಕಾರಾತ್ಮಕತೆಯ ಪ್ರಮಾಣ ಪತ್ರ ಹೊಂದಿರಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಕೇರಳ, ಮಹಾರಾಷ್ಟ್ರ, ಪಂಜಾಬ್ ಮತ್ತು ಚಂಡೀಗಢ್‌ನಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿತ್ತು.
ಬೆಂಗಳೂರಿನಲ್ಲಿ ದಾಖಲಾಗಿರುವ 60% ಪ್ರಕರಣಗಳು ಅಂತರರಾಜ್ಯ ಪ್ರಯಾಣದ ಇತಿಹಾಸವನ್ನು ಹೊಂದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿರುವುದರಿಂದ ಈ ಸೋಂಕು ದೃಢಪಟ್ಟಿರುವ ಎಲ್ಲರಿಗೂ ಮುದ್ರೆ (ಸೀಲ್) ಹಾಕಲಾಗುವುದು 20 ರಿಂದ 40 ವರ್ಷದೊಳಗಿರುವವರಲ್ಲೂ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಗಂಭೀರ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗ ಲಕ್ಷಣ ಇಲ್ಲದ ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ. ಅಂತಹವರು ಹೊರಗಡೆ ಓಡಾಟ ಮಾಡಬಾರದೆಂಬ ಉದ್ದೇಶದಿಂದ ಅವರಿಗೆ ಮುದ್ರೆ ಹಾಕಲಾಗುತ್ತದೆ” ಸಚಿವರು ಹೇಳಿದ್ದಾರೆ.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿವೆ. ಬುಧವಾರ ಸುಮಾರು 1,400 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಾಲ್ಕು ತಿಂಗಳುಗಳಲ್ಲಿ ಮೊದಲ ಬಾರಿ ಇಷ್ಟೊಂದು ಪ್ರಕರಣಗಳು ಕಂಡುಬಂದಿವೆ. ಈ ಪೈಕಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೋವಿಡ್ ಉಲ್ಭಣವಾಗುವುದನ್ನು ನಿಯಂತ್ರಿಸಲು ಪಾಲಿಕೆ ಕ್ರಮವಹಿಸುತ್ತಿದೆ” ಎಂದು ಹೇಳಿದರು.
“ನಗರದ ಮಾರುಕಟ್ಟೆ, ಚಿತ್ರಮಂದಿರ, ಬಸ್ ನಿಲ್ದಾಣ, ರೈಲು ನಿಲ್ದಾಣ, ಮದುವೆ ಮಂಟಪ, ಧಾರ್ಮಿಕ ಸ್ಥಳ, ಶಾಲಾ-ಕಾಲೇಜು ಆವರಣ ಮುಂತಾದ ಹೆಚ್ಚು ಜನಸಂದಣಿ ಇರುವ ಕಡೆ ಮಾರ್ಷಲ್‌ಗಳು ಕೋವಿಡ್ ನಿಯಂತ್ರಣ ನಿಯಮ ಪಾಲನೆ ಬಗ್ಗೆ ನಿಗಾ ವಹಿಸಲಿದ್ದಾರೆ. ಕನಿಷ್ಠ 2 ಮೀ ಅಂತರ ಕಾಪಾಡದಿದ್ದರೆ, ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸಲಿದ್ದಾರೆ. ನಗರದಲ್ಲಿ ಯಾವುದಾದರು ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡದಿರುವುದು ಕಂಡುಬಂದರೆ ಆಯೋಜಕರನ್ನೂ ಹೊಣೆಗಾರರನ್ನಾಗಿಸಿ, ಅವರಿಗೂ ದಂಡ ವಿಧಿಸಲಾಗುವುದು. ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಸಮಾರಂಭಗಳಲ್ಲಿ ತೆರೆದ ಸಭಾಂಗಣದಲ್ಲಿ 500 ಮಂದಿ ಹಾಗೂ ಮುಚ್ಚಿದ ಸಭಾಂಗಣಗದಲ್ಲಿ 200 ಮಂದಿ ಮಾತ್ರ ಭಾಗವಹಿಸಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕಣಗಳು ಕ್ರಮೇಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ವಾರ್ಡ್‌ಗೆ ತಲಾ ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ. ಸೋಂಕು ಪತ್ತೆ ಪ್ರಮಾಣ ನೋಡಿಕೊಂಡು ಅವಶ್ಯಕ್ಕನುಗುಣವಾಗಿ ಹೆಚ್ಚಿನ ಆಂಬ್ಯುಲೆನ್ಸ್ ನಿಯೋಜನೆ ಮಾಡಲು ಪಾಲಿಕೆ ಕ್ರಮವಹಿಸಲಿದೆ ಎಂದು ತಿಳಿಸಿದರು.
“ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಬುಧವಾರ 51,000 ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಲು 216 ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದೆ” ಎಂದು ವಿವರಿಸಿದರು.