
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ಬಳಿಕ ರಚನೆಯಾದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೀಗ ಒಂದು ವರ್ಷ ತುಂಬಿದೆ. ವರ್ಷ ತುಂಬುತ್ತಿದ್ದಂತೆ ನಾಯಕತ್ವ ಬದಲಾವಣೆಯ ಚರ್ಚೆಗಳು ಆರಂಭಗೊಂಡಿದೆ. ವಯಸ್ಸು ಹಾಗೂ ಇನ್ನಿತರ ಕಾರಣ ನೀಡಿ ಬಿ.ಎಸ್.ವೈ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಸಂಪುಟ ವಿಸ್ತರಣೆಯ ಗೊಂದಲ, ಸಚಿವಕಾಂಕ್ಷಿಗಳ ಬಂಡಾಯ, ನಿಗಮ ಮಂಡಳಿ ರಗಳೆ ಬಿ.ಎಸ್.ವೈ ಪಾಲಿಗೆ ಹೊಸ ತಲೆನೋವು ಉಂಟು ಮಾಡಿದೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಚರ್ಚೆಗಳು ಚಾಲ್ತಿಯಲ್ಲಿವೆ. ಇವೆಲ್ಲವನ್ನು ಮುಂದಿಟ್ಟುಕೊಂಡು ಬಿಎಸ್ವೈ ಅವರಿಂದ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡುವ ಯೋಚನೆ ವರಿಷ್ಠರಿಗಿದೆ ಎಂದು ಈಗಾಗಲೇ ಮೊಗಸಾಲೆಯ ಚರ್ಚೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ ಸಹಜವಾಗಿ ಕುತೂಹಲವನ್ನು ಕೆರಳಿಸಿದೆ. ಅದಲ್ಲೂ ಬಿಜೆಪಿ ಪಾಲಿಗೆ ಮತ್ತೊಂದು ಶಕ್ತಿ ಕೇಂದ್ರವಾಗಿರುವ ಬಿ.ಎಲ್ ಸಂತೋಷ್ ಅವರ ಭೇಟಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.