ನವದೆಹಲಿ : ರಫೇಲ್ ಯುದ್ಧ ವಿಮಾನ ತಂಡ ‘ಗೋಲ್ಡನ್ ಆರೋಸ್’ಗೆ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಿದ್ದಾರೆ. ವಾರಣಾಸಿ ಮೂಲದ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್, ರಫೇಲ್ ಯುದ್ಧ ಚಲಾಯಿಸುವ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2017ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾದ ಯುದ್ಧ ವಿಮಾನ 10 ಮಹಿಳಾ ಪೈಲಟ್‌ಗಳ ಎರಡನೆಯ ಬ್ಯಾಚ್ ಮೂಲಕ ಅವರು ಈ ಸಾಹಸಮಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಶಿವಾಂಗಿ ಅವರು ಇದುವರೆಗೂ ಮಿಗ್-21 ಯುದ್ಧ ವಿಮಾನಗಳನ್ನು ಚಲಾಯಿಸುತ್ತಿದ್ದರು. ಅಂಬಾಲಾದಲ್ಲಿರುವ ಗೋಲ್ಡನ್ ಆರೋಸ್‌ನ 17 ಪೈಲಟ್‌ಗಳ ತಂಡಕ್ಕೆ ಔಪಚಾರಿಕವಾಗಿ ಸೇರ್ಪಡೆಯಾಗಲಿದ್ದಾರೆ. ಪ್ರಸ್ತುತ ಅವರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ತರಬೇತಿ ಪೂರ್ಣಗೊಂಡ ಬಳಿಕ ಅವರು ಐಎಎಫ್‌ನ ಅತಿ ಹಳೆಯ ಜೆಟ್ ಮಿಗ್-21ರಿಂದ ಅತ್ಯಂತ ಹೊಸ ಜೆಟ್ ರಫೇಲ್‌ಗೆ ಪರಿವರ್ತನೆಯಾಗಲಿದ್ದಾರೆ. ಶಿವಾಂಗಿ ಅವರ ಸಹಪಾಠಿ ಹಾಗೂ ಮಹಿಳಾ ಯುದ್ಧ ವಿಮಾನ ಪೈಲಟ್ ಲೆಫ್ಟಿನೆಂಟ್ ಪ್ರತಿಭಾ ಕೂಡ ಪ್ರಸ್ತುತ ಎಸ್‌ಯು-30 ಎಂಕೆಐ ಯುದ್ಧ ವಿಮಾನ ಚಲಾಯಿಸುತ್ತಿದ್ದಾರೆ. ಮುಂದೆ ಓದಿ…
ಅಭಿನಂದನ್ ಜತೆ ಮಿಗ್ ಚಾಲನೆ

ಶಿವಾಂಗಿ ಸಿಂಗ್ ಅವರು ಇತ್ತೀಚೆಗಷ್ಟೇ ವಾಯುಪಡೆಗೆ ಸೇರ್ಪಡೆಯಾದ ಅತ್ಯಾಧುನಿಕ ಹಾಗೂ ಬಹು ಕಾರ್ಯದ ಯುದ್ಧ ವಿಮಾನ ರಫೇಲ್ ಜೆಟ್ ಚಲಾಯಿಸುವ ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಇದುವರೆಗೂ ಮಿಗ್-21 ಯುದ್ಧ ವಿಮಾನವನ್ನು ಜಗತ್ತಿನಾದ್ಯಂತ ಸುದ್ದಿಯಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಸೇರಿ ಚಲಾಯಿಸುತ್ತಿದ್ದರು.
ಬಾಲ್ಯದ ಕನಸು

ಚಿಕ್ಕ ವಯಸ್ಸಿನಿಂದಲೇ ಪೈಲಟ್ ಆಗುವ ಕನಸು ಕಂಡಿದ್ದ ಶಿವಾಂಗಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಶಿಕ್ಷಣ ಪೂರೈಸಿದ ಬಳಿಕ 2016ರಲ್ಲಿ ಏರ್ ಫೋರ್ಸ್ ಅಕಾಡೆಮಿಯ ತರಬೇತಿಗೆ ಸೇರಿಕೊಂಡಿದ್ದರು. ಎನ್‌ಸಿಸಿಯ 7 ಯುಪಿ ವೈಮಾನಿಕ ತಂಡದ ಭಾಗವಾಗಿದ್ದರು.
ಮಹಿಳಾ ಪೈಲಟ್‌ಗೆ ಇರಲಿಲ್ಲ ಅವಕಾಶ
ಐಎಎಫ್ ಮಹಿಳಾ ಸಿಬ್ಬಂದಿಯನ್ನು ಸಾರಿಗೆ ಹಾಗೂ ಹೆಲಿಕಾಪ್ಟರ್ ಪೈಲಟ್‌ಗಳನ್ನು ಸುದೀರ್ಘ ಸಮಯದಿಂದ ನೇಮಿಸುತ್ತಿದ್ದರೂ, ಯುದ್ಧ ವಿಮಾನಗಳ ನಿರ್ವಹಣೆಯಲ್ಲಿ ಅವಕಾಶ ನೀಡುತ್ತಿರಲಿಲ್ಲ. ಮಹಿಳಾ ಪೈಲಟ್‌ಗಳು ಮದುವೆಯಾಗಿ ಮಕ್ಕಳಾದರೆ ಈ ಪ್ರಕ್ರಿಯೆಗಳಲ್ಲಿ ಅವರು ಸರಿಯಾಗಿ ಪಾಲ್ಗೊಳ್ಳಲು ಆಗುವುದಿಲ್ಲ. ಒಬ್ಬ ಪೈಲಟ್ ತರಬೇತಿಗೆ 15 ಕೋಟಿ ರೂ ವೆಚ್ಚವಾಗುತ್ತದೆ. ಹೀಗಾಗಿ ಮಹಿಳಾ ಪೈಲಟ್‌ಗಳಿಗೆ ಆದ್ಯತೆ ನೀಡುತ್ತಿರಲಿಲ್ಲ.
ಏಕಾಂಗಿ ವಿಮಾನ ಚಾಲನೆ
ಈ ಮನಸ್ಥಿತಿಯನ್ನು 2016ರಲ್ಲಿ ಬದಲಿಸಿದ ಐಎಎಫ್ ಹತ್ತು ಮಹಿಳೆಯರನ್ನು ಯುದ್ಧ ವಿಮಾನ ಪೈಲಟ್‌ಗಳಾಗಿ ನೇಮಿಸಿಕೊಂಡು ತರಬೇತಿ ನೀಡಿತ್ತು. 2018ರ ಫೆಬ್ರವರಿಯಲ್ಲಿ ಮಿಗ್-21 ಬೈಸೊನ್ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸುವ ಮೂಲಕ ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಇತಿಹಾಸ ಸೃಷ್ಟಿಸಿದ್ದರು.