ಸಿದ್ದಿಪೇಟ್: ಈ ಲಾರಿ ಚಾಲಕ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ…ಆತನನ್ನು ರಕ್ಷಿಸಲು ರಕ್ಷಣಾ ಪಡೆಗಳು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೊನೆಗೂ ಆತ ಜೀವ ಸಹಿತ ಬರಲೇ ಇಲ್ಲ…
ಇದೊಂದು ದುರ್ಘಟನೆ ನಡೆದಿದ್ದು ತೆಲಂಗಾಣದ ಅಡಿಲಾಬಾದ್ ಜಿಲ್ಲೆಯಲ್ಲಿ. ಮೃತ ವ್ಯಕ್ತಿಯನ್ನು ಮುಡಿಗೊಂಡ ಶಂಕರ್ (35) ಎಂದು ಗುರುತಿಸಲಾಗಿದೆ. ಕಾಶಿರೆಡ್ಡಿ ಗ್ರಾಮದ ನಿವಾಸಿ. ಈತ ಮೃತಪಟ್ಟಿದ್ದು ಕೊಹೆಡಾ ಮಂಡಲ್ನಲ್ಲಿರುವ ಬಸ್ವಾಪುರ ಗ್ರಾಮದಲ್ಲಿ. ಈತ ತನ್ನ ಲಾರಿಯಲ್ಲಿ ಸಿದ್ದಿಪೇಟ್ನಿಂದ ಹಂಸಾಬಾದ್ಗೆ ತೆರಳುತ್ತಿದ್ದ. ಮುಂಜಾನೆ 4ಗಂಟೆ ಹೊತ್ತಿಗೆ ಬಸ್ವಾಪುರ ಸೇತುವೆ ಬಳಿ ಬರುತ್ತಿದ್ದಾಗ ಅಲ್ಲಿ ಪ್ರವಾಹ ಏರುತ್ತಿತ್ತು. ಆದರೂ ಚಾಲಕ ಲಾರಿಯನ್ನು ಮುಂದೆ ಡ್ರೈವ್ ಮಾಡಲು ಪ್ರಯತ್ನಿಸಿದ. ಆದರೆ ಸ್ವಲ್ಪ ದೂರ ಬರುತ್ತಿದ್ದಂತೆ ಲಾರಿ ಅಲುಗಾಡಲು ಶುರುವಾಯಿತು. ಚಾಲಕ ಶಂಕರ್ಗೆ ಅಪಾಯದ ಅರಿವಾಯಿತು. ಕೂಡಲೇ ಲಾರಿಯಿಂದ ಅಲ್ಲಿಯೇ ಇದ್ದ ಮರಕ್ಕೆ ಹಾರಿದ್ದರು. ಅದೇ ಲಾರಿಯಲ್ಲಿದ್ದ ಕ್ಲೀನರ್ ಧರ್ಮಯ್ಯ ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದ. ಅವನು ಬಂದು ಸ್ಥಳೀಯರಿಗೆ ಚಾಲಕ ಅಪಾಯದಲ್ಲಿ ಸಿಲುಕಿದ್ದನ್ನು ಹೇಳಿದ್ದ.
ಮರದ ಮೇಲೆ ಸಿಲುಕಿದ್ದ ಲಾರಿ ಚಾಲಕನನ್ನು ರಕ್ಷಿಸಲು ಚಾಪರ್ ಬರುವುದು ಅನಿವಾರ್ಯವಾಗಿತ್ತು. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಚಾಪರ್ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಎನ್ಡಿಆರ್ಎಫ್ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಬರುಬರುತ್ತ ಪ್ರವಾಹದ ಮಟ್ಟ ಏರಿದ ಕಾರಣ, ಮರದ ಮೇಲಿದ್ದ ಶಂಕರ್ ಕೊಚ್ಚಿಕೊಂಡು ಹೋಗಿದ್ದಾರೆ. ಅವರು ಪ್ರವಾಹದಲ್ಲಿ ಹೋದ ಬಳಿಕ ಚಾಪರ್ ಸ್ಥಳಕ್ಕೆ ಆಗಮಿಸಿದ್ದು ಇನ್ನೂ ದೊಡ್ಡ ದುರಂತ.
ಸದ್ಯ ಎನ್ಡಿಆರ್ಎಫ್ ಸಿಬ್ಬಂದಿ ಮೃತ ಶಂಕರ್ನ ಶವದ ಹುಡುಕಾಟದಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್)