Breaking News

ಪೋಸ್ಟ್‌ಗಳ ಮೇಲೆ ನಿಗಾ: ಪ್ರಚೋದನಾತ್ಮಕ ಪೋಸ್ಟ್‌ ಕಳುಹಿಸುವವರ ಮೇಲೆ ಹದ್ದುಗಣ್ಣು

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ ಹಾಕುವವರ ವಿರುದ್ಧ ಕಠಿನ ಕ್ರಮಕ್ಕೆ ಸರಕಾರ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲಾಗುತ್ತಿರುವುದರಿಂದ ಈ ಕುರಿತು ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುವುದಕ್ಕೂ ತೀರ್ಮಾನಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ ಹಾಕುವವರ ಮೇಲೆ ಹದ್ದಿನ ಕಣ್ಣಿಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆಯಪ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ.

ಇಂಥ ಘಟನೆ ನಡೆದ ಮೇಲೆ ಕ್ರಮ ತೆಗೆದುಕೊಳ್ಳುವುದು ಒಂದು ಭಾಗ. ಘಟನೆ ಆಗುವ ಮುನ್ನವೇ ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂದು ಚರ್ಚಿಸಲಾಗುತ್ತಿದೆ ಎಂದು ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬೊಮ್ಮಾಯಿ ತಿಳಿಸಿದರು.

ಮುಂದಿನ ವಾರದಲ್ಲಿ ಸೈಬರ್‌ ಕ್ರೈಮ್‌ ಪೊಲೀಸರ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರೊಂದಿಗೂ ಸಭೆ ನಡೆಸಿ, ದುರ್ಬಳಕೆ ಮೇಲೆ ನಿರಂತರ ನಿಗಾ ಇಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಆಗಸ್ಟ್‌ 18ರ ವರೆಗೂ ಜಾರಿಯಲ್ಲಿರಲಿದೆ ಎಂದರು.

ಮತ್ತೆ 85 ಮಂದಿ ಬಂಧನ
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ರವಿವಾರ ಇಬ್ಬರು ಎಸ್‌ಡಿಪಿಐ ಕಾರ್ಯಕರ್ತರ ಸಹಿತ ಮತ್ತೆ 85 ಮಂದಿಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 370ಕ್ಕೆ ಏರಿದೆ.

ಗೋವಿಂದಪುರದ ಎಸ್‌ಡಿಪಿಐ ಜಂಟಿ ಕಾರ್ಯದರ್ಶಿ ಸಲೀಂ ಖಾನ್‌, ಫೈರೋಜ್‌ ಪ್ರಮುಖ ಬಂಧಿತರು. ಇದಲ್ಲದೆ ಶನಿವಾರ ರಾತ್ರಿಯೂ ಕಾರ್ಯಾಚರಣೆ ನಡೆಸಿ ಕೆಲವರನ್ನು ಬಂಧಿಸಲಾಗಿತ್ತು.

52 ಪ್ರಕರಣ ದಾಖಲು
ಗಲಭೆಗೆ ಸಂಬಂಧಿಸಿದಂತೆ ಕೆ.ಜಿ. ಹಳ್ಳಿಯಲ್ಲಿ 14 ಮತ್ತು ಡಿ.ಜೆ. ಹಳ್ಳಿಯಲ್ಲಿ ಮತ್ತೆ 38 ಪ್ರಕರಣಗಳ ಸಹಿತ ಒಟ್ಟು 52 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೋಷಕರ ಅಳಲು
ಶನಿವಾರ ತಡರಾತ್ರಿ ಹಲವರನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಆರೋಪಿಗಳ ಪೋಷಕರು ಹೈಡ್ರಾಮಾ ಸೃಷ್ಟಿಸಿದ ಘಟನೆ ರವಿವಾರ ಬೆಳಗ್ಗೆ ನಡೆಯಿತು. ಡಿ.ಜೆ. ಹಳ್ಳಿ ಠಾಣೆ ಬಳಿ ಜಮಾಯಿಸಿದ್ದ ಪೋಷಕರು ಮತ್ತು ಕುಟುಂಬಸ್ಥರು, ಪೊಲೀಸರು ಮಕ್ಕಳನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದರು.

ಬಿಜೆಪಿ ಪರಿಶೀಲನ ಸಮಿತಿ ಭೇಟಿ
ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್‌, ಅರವಿಂದ ಲಿಂಬಾವಳಿ ಮತ್ತು ಸಂಸದ ಪಿ.ಸಿ. ಮೋಹನ್‌ ನೇತೃತ್ವದ ಬಿಜೆಪಿ ಪರಿಶೀಲನ ತಂಡ ರವಿವಾರ ಡಿ.ಜೆ. ಹಳ್ಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಶಾಸಕರ ಮನೆ ಮತ್ತು ಪೊಲೀಸ್‌ ಠಾಣೆ ಗುರಿಯಾಗಿರಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದರು.

ರಾಹುಲ್‌ ಗಾಂಧಿ ಮೌನವೇಕೆ: ರವಿಶಂಕರ್‌ ಪ್ರಶ್ನೆ
ಬಿಜೆಪಿ, ಆರೆಸ್ಸೆಸ್‌ ಸಂಘಟನೆಗಳು ಭಾರತದಲ್ಲಿ ಫೇಸ್‌ಬುಕ್‌- ವಾಟ್ಸ್‌ ಆಯಪ್‌ಗಳನ್ನು ನಿಯಂತ್ರಿಸುತ್ತಿವೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ತಿರುಗೇಟು ನೀಡಿದ್ದಾರೆ.

‘ಇಂದು ಮಾಹಿತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವಗೊಳಿಸಲಾಗಿದೆ. ಅದೀಗ ನಿಮ್ಮ ಕುಟುಂಬದ ನಿಯಂತ್ರಣದಲ್ಲಿಲ್ಲ. ಅಂದಹಾಗೆ ಬೆಂಗಳೂರಿನಂಥ ಗಲಭೆ ವಿಚಾರಗಳ ಬಗ್ಗೆ ನಿಮ್ಮ ಖಂಡನೆಗಳನ್ನು ಇದುವರೆಗೂ ನಾವು ಕೇಳಿಲ್ಲ. ಈ ಬಗ್ಗೆ ನೀವೇಕೆ ಮಾತನಾಡುತ್ತಿಲ್ಲ? ನಿಮ್ಮ ಧೈರ್ಯ ಎಲ್ಲಿ ಮಾಯವಾಗಿದೆ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

‘ತಮ್ಮ ಪಕ್ಷದ ಜನರ ಮೇಲೆ ಪ್ರಭಾವ ಬೀರಲು ಸಾಧ್ಯವಾಗದೆ ಸೋತವರು ಇಂಥ ಹೇಳಿಕೆ ನೀಡುತ್ತಲೇ ಇರುತ್ತಾರೆ. ಚುನಾವಣೆಯ ಪೂರ್ವದಲ್ಲಿ ಜನರನ್ನು ಸೆಳೆಯಲು, ಸೋಷಿಯಲ್‌ ಮೀಡಿಯಾ ದತ್ತಾಂಶ ಪಡೆಯಲು ನೀವು ಕೇಂಬ್ರಿಜ್‌ ಅನಾಲಿಟಿಕಾ ಮತ್ತು ಫೇಸ್‌ಬುಕ್‌ ಜತೆ ಮೈತ್ರಿ ಮಾಡಿಕೊಂಡಿದ್ದು ಜಗತ್ತಿಗೆಲ್ಲ ಗೊತ್ತಿರುವ ವಿಚಾರ’ ಎಂದು ಟೀಕಿಸಿದ್ದಾರೆ.

ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಎಲ್ಲ ರೀತಿಯ ಭದ್ರತೆ ಒದ ಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅವರ ಮನೆ ಬಳಿಯೂ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ

About vijay_shankar

Check Also

BJP ತೋರೆದು ಕಾಂಗ್ರೆಸ್ ಕೈ ಹಿಡಿದ ರಂಗಪ್ಪ ಸುರಪೂರ

ಇಲಕಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:- ಕೆಪಿಸಿಸಿ ಸದಸ್ಯರಾದ ಶಾಂತಕುಮಾರ್ ಸುರಪುರ ಅವರ ನೇತೃತ್ವದಲ್ಲಿ ಯುವ ಮುಖಂಡರಾದ ರಂಗಪ್ಪ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.