ದಾವಣಗೆರೆ: ಪೂರ್ವ ಆಫ್ರಿಕಾದ ಮಡಗಾಸ್ಕರ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ ಗ್ರಾಮದ 17 ಮಂದಿ ಗಿಡಮೂಲಿಕೆ ವ್ಯಾಪಾರಿಗಳು ಐದು ತಿಂಗಳ ಬಳಿಕ ವಿಶೇಷ ವಿಮಾನದ ಮೂಲಕ ಗುರುವಾರ ಭಾರತಕ್ಕೆ ಮರಳಿ ಬಂದರು.
ಬುಧವಾರ ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.30) ‘ಏರ್ ಮಡಗಾಸ್ಕರ್’ ವಿಮಾನದಲ್ಲಿ ಹೊರಟ ವ್ಯಾಪಾರಿಗಳು, ಗುರುವಾರ ಮುಂಜಾನೆ 3.30ಕ್ಕೆ ಮುಂಬೈ ವಿಮಾನನಿಲ್ದಾಣಕ್ಕೆ ಬಂದು ಇಳಿದರು. ಬಳಿಕ ಅವರೆಲ್ಲರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಲಾಯಿತು. ಏಳು ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಂಡ ಬಳಿಕ ಟೆಂಪೊ ಟ್ರಾವೆಲರ್ ಮೂಲಕ ಸ್ವಗ್ರಾಮ ಗೋಪನಾಳಕ್ಕೆ ಇವರು ಬರಲಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದ 17 ಮಂದಿ ಗಿಡಮೂಲಿಕೆಗಳ ವ್ಯಾಪಾರಕ್ಕಾಗಿ ಏಪ್ರಿಲ್ ತಿಂಗಳಲ್ಲಿ ಮಡಗಾಸ್ಕರ್‌ಗೆ ತೆರಳಿದ್ದರು.
ಕೋವಿಡ್-19 ರೋಗ ಉಲ್ಬಣಿಸಿದ್ದರಿಂದ ಲಾಕ್‌ಡೌನ್ ಜಾರಿಯಾಗಿತ್ತು. ಅಂತರರಾಷ್ಟ್ರೀಯ ವಿಮಾನ ಸಂಚಾರ ರದ್ದಾಗಿದ್ದರಿಂದ ಸ್ವದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ವ್ಯಾಪಾರದಲ್ಲೂ ನಷ್ಟವಾಗಿದ್ದರಿಂದ ಇದ್ದ ಅಲ್ಪ-ಸ್ವಲ್ಪ ಹಣದಲ್ಲೇ ಜೂನ್ ತಿಂಗಳವರೆಗೂ ಹೇಗೋ ಕಳೆದಿದ್ದರು.
ಆ ನಂತರ ಊಟ ಹಾಗೂ ವಸತಿಗೆ ತೊಂದರೆಯಾಗಿದ್ದರಿಂದ ತಮ್ಮನ್ನು ವಾಪಸ್ ಕರೆಸಿಕೊಳ್ಳುವಂತೆ ವಿಡಿಯೊ ಮಾಡಿ ಜಿಲ್ಲೆಯಲ್ಲಿರುವ ಸಂಬಂಧಿಕರಿಗೆ ಕಳುಹಿಸಿಕೊಟ್ಟಿದ್ದರು. ಸಂಬಂಧಿಕ ಎಂ.ಪಿ.ಶಂಕರ್ ಅವರು, ವ್ಯಾಪಾರಿಗಳನ್ನು ಊರಿಗೆ ಕರೆತರಲು ವ್ಯವಸ್ಥೆ ಮಾಡುವಂತೆ ದಾವಣಗೆರೆ ಸಂಸದ ಜಿ.ಎ.ಸಿದ್ದೇಶ್ವರ ಅವರಿಗೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಸಂಸದರು, 17 ಮಂದಿಯನ್ನು ದೇಶಕ್ಕೆ ಕರೆತರಲು ವ್ಯವಸ್ಥೆ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವರು ಹಾಗೂ ಪೂರ್ವ ಆಫ್ರಿಕಾದ ಭಾರತೀಯ ರಾಯಭಾರಿಗೆ ಪತ್ರ ಬರೆದಿದ್ದರು.
ಇದಕ್ಕೆ ಸ್ಪಂದಿಸಿದ ಪೂರ್ವ ಆಫ್ರಿಕಾದ ಭಾರತೀಯ ರಾಯಭಾರಿ, ಆಗಸ್ಟ್ 19ರಂದು ‘ಏರ್ ಮಡಗಾಸ್ಕರ್’ ವಿಮಾನದ ವ್ಯವಸ್ಥೆಯನ್ನು ಮಾಡಿದ್ದರು.
‘ವಿಮಾನ ಪ್ರಯಾಣದ ಟಿಕೆಟ್ ದರವನ್ನು ಒಬ್ಬರಿಗೆ 1,200 ಡಾಲರ್ (₹ 89,976) ನಿಗದಿಪಡಿಸಲಾಗಿತ್ತು. ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ಸಂಕಟ ಹೇಳಿಕೊಂಡಿದ್ದೆವು. ಸಂಸದರು ಪತ್ರ ಬರೆದಿದ್ದರಿಂದ ಅಂತಿಮವಾಗಿ ಉಚಿತವಾಗಿಯೇ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು’ ಎಂದು ಮಡಗಾಸ್ಕರ್‌ನಿಂದ ವಾಪಸ್ಸಾದ ಸಂದೀಪ್ ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದರು.