
ಇಂಡಿ: ‘ಜನಪದ ಸಂಸ್ಕೃತಿ ಜೇನುಗೂಡಿನ ಸಂಸ್ಕೃತಿ. ಜನ ಸಾಮಾನ್ಯರನ್ನು ಆಕರ್ಷಿಸುವ ಅದಮ್ಯ ಶಕ್ತಿ ಅದರಲ್ಲಿದೆ. ಇಂತಹ ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಶಿರಶ್ಯಾಡ ಗ್ರಾಮದ ಹಿರೇಮಠದಲ್ಲಿ ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಕನ್ನಡ ಜಾನಪದ ಪರಿಷತ್ತು ಇಂಡಿ, ಮಾತೋಶ್ರೀ ಶೈಲಜಾ ವಿ ಹಿರೇಮಠ ಅವರ 3ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ರಾಜ್ಯ ಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ರಾಜ್ಯಾದ್ಯಂತ ಜನಪದ ಕಲೆಗಳ ಉಳಿವಿಗಾಗಿ ಹಾಗೂ ಬೆಳವಣಿಗೆಗಾಗಿ ನಮ್ಮ ಸಂಸ್ಥೆಯು ಅವಿರತವಾಗಿ ಶ್ರಮಿಸುತ್ತಿದ್ದು, ಪ್ರತಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಗ್ರಾಮ ಘಟಕಗಳನ್ನು ಆರಂಭಿಸುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಬಹುಮುಖ್ಯ ಎಂದರು.

ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡುತ್ತಾ ಮಾತನಾಡಿ, ಜಾನಪದವು ಶಿಷ್ಟ ಸಾಹಿತ್ಯದ ತಾಯಿ ಬೇರು. ನಮ್ಮ ಬದುಕಿನ ಜೀವಂತ ಚಿತ್ರಣವೇ ಜನಪದದಲ್ಲಿದೆ. ಜನಪದ ಕಲಾವಿದರು ತಮ್ಮ ಕಲೆಗಳ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡು, ದೇಶದ ಸಂಸ್ಕೃತಿಯ ಮೂಲ ಬೇರುಗಳನ್ನು ಗಟ್ಟಿ ಮಾಡುತ್ತಿರುವದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕ ಎಸ್ ಆರ್ ಪಾಟೀಲ ಮಾತನಾಡಿ, ಜಾನಪದ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ, ಸಂಗೀತ, ಸಂಪ್ರದಾಯಗಳಿಗೆ ಸರ್ವಶ್ರೇಷ್ಠ ಸ್ಥಾನವಿದ್ದು, ಇಂದಿನ ವಿದ್ಯಾರ್ಥಿಗಳು ಈ ಸುಂದರ ಜಾನಪದ ಕಲೆಗಳನ್ನು ಉಳಿಸಿ-ಬೆಳೆಸಬೇಕೆಂದು ಮನವಿ ಮಾಡಿದರು.
ಜೈನಾಪುರ ಹಿರೇಮಠದ ಷ ಬ್ರ ರೇಣುಕ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ಆಧುನಿಕತೆ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವಂತಹ ಈ ಕಾರ್ಯ ಶ್ಲಾಘನೀಯ ಎಂದರು.

ನೇತೃತ್ವ ವಹಿಸಿದ್ದ ಷ ಬ್ರ ಅಭಿನವ ಮುರುಗೇಂದ್ರ ಶಿವಾಚಾರ್ಯರು ಮಾತನಾಡಿ, ‘ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ಪಂಡಿತ ಅವಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಎಸ್ ಅರಳಗುಂಡಗಿ, ಬಸವರಾಜ ಗೊರನಾಳ, ಶ್ರೀಮಂತ ನೇದಲಗಿ, ಸಿದ್ಧಾರೂಢ ಕೊಳ್ಳುರ ಆಗಮಿಸಿದ್ದರು. ತಾಲೂಕ ಪ್ರಧಾನ ಕಾರ್ಯದರ್ಶಿ
ಜಟ್ಟಪ್ಪ ಮಾದರ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಕಲಾ ತಂಡಗಳಿಂದ ಗೀಗಿ ಪದಗಳು, ಗೊಂದಲ ಪದಗಳು, ಪೋತರಾಜ ನೃತ್ಯ, ಹಂತಿಪದಗಳು, ಚೌಡಕಿ ಪದಗಳು, ಡೊಳ್ಳಿನ ಪದಗಳು ಜರುಗಿದವು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News