Breaking News

ಮೊಬೈಲ್‌ ಟ್ಯಾರಿಫ್: ಸ್ಪಷ್ಟ ವಿವರ ನೀಡಲು ಟ್ರಾಯ್ ತಾಕೀತು

ನವದೆಹಲಿ: ದೂರಸಂಪರ್ಕ ಕಂಪನಿಗಳು ತಮ್ಮ ಯೋಜನೆಗಳ ಬಗ್ಗೆ ಪ್ರಕಟಣೆ ನೀಡುವಾಗ ಹಾಗೂ ಜಾಹೀರಾತು ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವು (ಟ್ರಾಯ್‌) ಶುಕ್ರವಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮೊಬೈಲ್‌ ಸೇವೆಗಳಿಗೆ ಸಂಬಂಧಿಸಿದ ಆಫರ್‌ಗಳ ವಿಚಾರದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಇದರ ಹಿಂದಿದೆ ಎಂದು ಹೇಳಿದೆ.

‘ದೂರಸಂಪರ್ಕ ಸೇವಾದಾತರು ಈಗ ಅನುಸರಿಸುತ್ತಿರುವ ಕ್ರಮಗಳು ಪಾರದರ್ಶಕವಾಗಿ ಇಲ್ಲ ಎಂಬುದು ಗಮನಕ್ಕೆ ಬಂದಿದೆ. ಕೆಲವು ಕಂಪನಿಗಳು ಹೆಚ್ಚುವರಿ ಷರತ್ತು ಮತ್ತು ನಿಬಂಧನೆಗಳನ್ನು ಸ್ಪಷ್ಟವಾಗಿ, ಎದ್ದುಕಾಣುವಂತೆ ತೋರಿಸುತ್ತಿಲ್ಲ. ಬೇರೆ ಬೇರೆ ಪ್ಲ್ಯಾನ್‌ಗಳಿಗೆ ಅನ್ವಯವಾಗುವ ನಿಯಮಗಳನ್ನು ಒಂದೇ ವೆಬ್‌ ಪುಟದಲ್ಲಿ ನೀಡುತ್ತಿದ್ದಾರೆ. ಇತರ ವಿವರಗಳ ನಡುವೆ ಅಗತ್ಯ ಮಾಹಿತಿಯು ಕಳೆದುಹೋಗುತ್ತದೆ ಅಥವಾ ಅಸ್ಪಷ್ಟವಾಗಿಬಿಡುತ್ತದೆ.

ಅಗತ್ಯ ಮಾಹಿತಿ ಅರ್ಥ ಮಾಡಿಕೊಳ್ಳಲು ಗ್ರಾಹಕರಿಗೆ ಆಗುವುದಿಲ್ಲ’ ಎಂದು ಟ್ರಾಯ್‌ ತನ್ನ ಸೂಚನೆಯಲ್ಲಿ ವಿವರಿಸಿದೆ.

ದೂರಸಂಪರ್ಕ ಕಂಪನಿಗಳು ಸೇವಾ ವಲಯ ಆಧರಿಸಿ, ಪೋಸ್ಟ್‌ಪೇಯ್ಡ್‌ ಮತ್ತು ಪ್ರೀಪೇಯ್ಡ್‌ ಗ್ರಾಹಕರ ಪ್ರತಿ ಯೋಜನೆಯ ಶುಲ್ಕದ ಪೂರ್ಣ ವಿವರ ಪ್ರಕಟಿಸಬೇಕು. ಗ್ರಾಹಕ ಸೇವಾ ಕೇಂದ್ರಗಳಲ್ಲಿ, ಮಾರಾಟ ಕೇಂದ್ರಗಳಲ್ಲಿ, ರಿಟೇಲ್ ಅಂಗಡಿಗಳಲ್ಲಿ, ವೆಬ್‌ಸೈಟ್ ಮತ್ತು ಆಯಪ್‌ಗಳ ಮೂಲಕ ಗ್ರಾಹಕರಿಗೆ ಪೂರ್ಣ ಮಾಹಿತಿ ನೀಡಬೇಕು. ಈ ಕೆಲಸ ಹದಿನೈದು ದಿನಗಳಲ್ಲಿ ಆಗಬೇಕು ಎಂದು ಟ್ರಾಯ್‌ ಸೂಚಿಸಿದೆ.

ಯಾವ ಪ್ಲ್ಯಾನ್ ಅಡಿ ಎಷ್ಟು ಧ್ವನಿ ಕರೆಗಳನ್ನು ಮಾಡಬಹುದು, ಎಷ್ಟು ಡೇಟಾ ಬಳಸಬಹುದು, ಎಸ್‌ಎಂಎಸ್‌ ಎಷ್ಟು ರವಾನಿಸಬಹುದು ಮತ್ತು ಅದಕ್ಕೆ ಎಷ್ಟು ಹಣ ಪಾವತಿಸಬೇಕು, ಬಳಕೆಗೆ ಮಿತಿ ಇದೆಯೇ, ಡೇಟಾ ಬಳಕೆಯ ಮಿತಿ ದಾಟಿದ ನಂತರ ಅದರ ವೇಗ ಎಷ್ಟಾಗುತ್ತದೆ ಎಂಬುದರ ವಿವರಗಳನ್ನು ಕಂಪನಿಗಳು ಗ್ರಾಹಕರಿಗೆ ಕಡ್ಡಾಯವಾಗಿ ಒದಗಿಸಬೇಕಿದೆ.

ಪೋಸ್ಟ್‌ ಪೇಯ್ಡ್‌ ಯೋಜನೆಗಳ ವಿಚಾರವಾಗಿ ತಕ್ಷಣಕ್ಕೆ ಪಾವತಿಸಬೇಕಾದ ಮೊತ್ತ, ಠೇವಣಿ ರೂಪದಲ್ಲಿ ಇರಿಸಬೇಕಿರುವ ಮೊತ್ತ, ಸಂಪರ್ಕ ಶುಲ್ಕ, ಟಾಪ್‌ಅಪ್‌ ಶುಲ್ಕ ಇತ್ಯಾದಿಗಳ ಬಗ್ಗೆಯೂ ಕಂಪನಿಗಳು ಗ್ರಾಹಕರಿಗೆ ಪಾರದರ್ಶಕವಾಗಿ ವಿವರ ನೀಡಬೇಕಿದೆ. ‘ಸ್ಪಷ್ಟವಾದ, ಅರ್ಥ ಮಾಡಿಕೊಳ್ಳಲು ಸುಲಭವಾದ’ ರೀತಿಯಲ್ಲಿ ಯೋಜನೆಯ ವ್ಯಾಲಿಡಿಟಿ ಬಗ್ಗೆ ಹಾಗೂ ಬಿಲ್ ಬಾಕಿ ಪಾವತಿಸಲು ಇರುವ ಕೊನೆಯ ದಿನಾಂಕದ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಟ್ರಾಯ್ ಹೇಳಿದೆ.

ಬಳಕೆದಾರರಿಗೆ ಎಷ್ಟು ವೇಗದ ಇಂಟರ್ನೆಟ್‌ ಸಂಪರ್ಕ ಸಿಗುತ್ತದೆ ಎಂಬುದನ್ನು ಕಂಪನಿಗಳು ಸ್ಪಷ್ಟವಾಗಿ ತಿಳಿಸಬೇಕಿದೆ. ವೇಗದ ಡೇಟಾ ಬಳಕೆಗೆ ಇರುವ ಮಿತಿಯ ಬಗ್ಗೆಯೂ ಅವು ತಿಳಿಸಬೇಕಿದೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.