ಮುಂಬೈ: ಮಹಾರಾಷ್ಟ್ರ ಅಭಿವೃದ್ಧಿಗೆ ರಚನೆಯಾಗಿರುವ ‘ಮಹಾ ವಿಕಾಸ್ ಅಘಾಡಿʼ ಸಮ್ಮಿಶ್ರ ಸರ್ಕಾರದ ಆಂತರಿಕ ಕಿತ್ತಾಟ ಮತ್ತಷ್ಟು ಜಾಸ್ತಿಯಾಗಿದ್ದು ಮೊದಲ ವಿಕೆಟ್ ಪತನಗೊಂಡಿದೆ.
ಪರಭಾನಿ ಕ್ಷೇತ್ರದ ಶಿವಸೇನೆ ಸಂಸದ ಸಂಜಯ್ ಜಾಧವ್ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರವಾನಿಸಿದ್ದಾರೆ.

ಪರಭಾನಿ ಜಿಲ್ಲೆಯ ಜಿಂತೂರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಸರ್ಕಾರೇತರ ಆಡಳಿತಾಧಿಕಾರಿಯನ್ನಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್‌ಸಿಪಿ) ಪಕ್ಷದ ಬೆಂಬಲಿಗ ವ್ಯಕ್ತಿಯನ್ನು ನೇಮಿಸಲಾಗಿದೆ. ಇದು ಜಾಧವ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಂತೂರ್ ಎಪಿಎಂಸಿಯ ಆಡಳಿತಾಧಿಕಾರಿಗಳ ನೇಮಕ ಸಂಬಂಧ ನಾನು ಕಳೆದ 8-10 ತಿಂಗಳಿಂದ ಪ್ರಯತ್ನ ನಡೆಸುತ್ತಾ ಬಂದಿದ್ದೇನೆ. ಆದರೆ ಈಗ ಎನ್‌ಸಿಪಿಯ ವ್ಯಕ್ತಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಮೂಲಕ ಶಿವಸೇನೆ ಕಾರ್ಯಕರ್ತರಿಗೆ ಅವಮಾನ ಮಾಡಲಾಗಿದೆ ಎಂದು ದೂರಿದ್ದಾರೆ.
ನನ್ನ ಕ್ಷೇತ್ರದ ಶಿವಸೇನೆ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದ ಮೇಲೆ ನಾನು ಸಂಸದನಾಗಿ ಯಾಕಿರಬೇಕು. ಸಂಸದನಾಗಿರಲು ನನಗೆ ಯಾವುದೇ ಹಕ್ಕಿಲ್ಲ. ನನ್ನ ರಾಜೀನಾಮೆಯನ್ನು ಸ್ವೀಕರಿಸಿ ಎಂದು ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.

ಸಂಜಯ್ ಜಾಧವ್ ಅವರು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.