ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆಂದು ಉತ್ತರ ಪ್ರದೇಶ ಸರ್ಕಾರ ಸುನ್ನಿ ವಕ್ಫ್ ಮಂಡಳಿಗೆ ನೀಡಿದ್ದ ಐದು ಎಕರೆ ಭೂಮಿ ನಮ್ಮದು ಎಂದು ದೆಹಲಿ ಮೂಲದ ಇಬ್ಬರು ಸಹೋದರಿಯರು ಬುಧವಾರ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯದ ನೋಂದಾವಣೆಯಲ್ಲಿ ದಾಖಲಿಸಲಾಗಿದ್ದು, ಫೆಬ್ರವರಿ 8 ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ತಮ್ಮ ತಂದೆ ಜ್ಞಾನ ಚಂದ್ರ ಪಂಜಾಬಿ 1947 ರಲ್ಲಿ ವಿಭಜನೆಯ ಸಮಯದಲ್ಲಿ ಪಂಜಾಬ್‌ನಿಂದ ಬಂದು ಫೈಜಾಬಾದ್ (ಈಗಿನ ಅಯೋಧ್ಯೆ) ಜಿಲ್ಲೆಯಲ್ಲಿ ನೆಲೆಸಿದ್ದರು” ಎಂದು ಅರ್ಜಿದಾರರಾದ ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಜಾ ಮತ್ತು ರಾಮ ರಾಣಿ ಪಂಜಾಬಿ ಹೇಳಿಕೊಂಡಿದ್ದಾರೆ.
ತಮ್ಮ ತಂದೆಗೆ ಧನ್ನಿಪುರ ಗ್ರಾಮದಲ್ಲಿ 28 ಎಕರೆ ಭೂಮಿಯನ್ನು ಐದು ವರ್ಷಗಳ ಕಾಲ ನಜುಲ್ ಇಲಾಖೆಯಿಂದ ಮಂಜೂರು ಮಾಡಲಾಗಿತ್ತು. ಬಳಿಕ ದಾಖಲೆಗಳಿಂದ ಅವರ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಹೆಸರನ್ನು ತೆಗೆದು ಹಾಕಿರುವ ಅಧಿಕಾರಿಯ ಆದೇಶದ ವಿರುದ್ಧ, ಅಯೋಧ್ಯೆಯ ಏಕೀಕರಣದ ವಸಾಹತು ಅಧಿಕಾರಿಯ ಮುಂದೆ ಮನವಿಯನ್ನು ನೀಡಲಾಗಿತ್ತು. ಆದರೆ ಈ ಅರ್ಜಿಯನ್ನು ಪರಿಗಣಿಸದೆ, ಅಧಿಕಾರಿಗಳು ತಮ್ಮ 28 ಎಕರೆ ಭೂಮಿಯಲ್ಲಿ ಐದು ಎಕರೆ ಭೂಮಿಯನ್ನು ಮಸೀದಿ ನಿರ್ಮಾಣಕ್ಕಾಗಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿದ್ದಾರೆ” ಎಂದು ಅರ್ಜಿದಾರ ಸಹೋದರಿಯರು ತಿಳಿಸಿದ್ದಾರೆ.
ವಸಾಹತು ಅಧಿಕಾರಿಯ ಮುಂದೆ ವಿವಾದ ಬಾಕಿ ಇರುವವರೆಗೂ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ಹಸ್ತಾಂತರಿಸುವುದನ್ನು ತಡೆಯಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
1992 ರಲ್ಲಿ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕರ ಸೇವಕರು ಕೆಡವಿ ಹಾಕಿದ್ದರು. ರಾಮಮಂದಿರದ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿತ್ತು. ನಂತರ ಈ ವಿವಾದ ಆಗಿನಿಂದಲೂ ಕೋರ್ಟ್‌ನಲ್ಲಿತ್ತು. 2020 ರಲ್ಲಿ ಇದಕ್ಕೆ ಅಂತಿಮ ತೀರ್ಪು ನೀಡಿದ ಮಾಜಿ ನ್ಯಾಯಮೂರ್ತಿ ಮತ್ತು ಹಾಲಿ ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್, ಮಸೀದಿ ಕೆಡವಿದ್ದನ್ನು ಸಮರ್ಥಿಸಿಕೊಂಡು ಈ ಜಾಗ ಹಿಂದೂಗಳಿಗೆ ಸೇರಬೇಕು ಎಂದು ತೀರ್ಪು ನೀಡಿದ್ದರು. ಜೊತೆಗೆ ಅಯೋಧ್ಯೆಯಲ್ಲಿಯೇ ಮಸೀದಿ ನಿರ್ಮಾಣಕ್ಕೂ 5 ಎಕರೆ ಸ್ಥಳ ನೀಡಬೇಕು ಎಂದು ಆದೇಶಿಸಿದ್ದರು. ಇದರನ್ವಯ ಭೂಮಿಯನ್ನು ನೀಡಲಾಗಿತ್ತು. ಆದರೆ ಈಗ ಆ ಜಾಗಕ್ಕೂ ಮತ್ತೊಂದು ಮತ್ತೊಂದು ವಿವಾದ ಸುತ್ತಿಕೊಂಡಿದೆ.