ಪೆಟ್ರೋಲ್/ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾಮಾನ್ಯ ಜನರು ತೊಂದರೆಗೊಳಗಾಗುತ್ತಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಈ ಕುರಿತು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಪತ್ರಿಕಾ ಹೇಳಿಕೆ ನೀಡಿದ್ದು, ಕನ್ನಡಿಗರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಹೇಳಿಕೆಯಲ್ಲಿ “ಕರ್ನಾಟಕಕ್ಕೆ ಅನ್ಯಾಯದ ಸರಣಿ ಮುಂದುವರೆದಿದೆ, ಒಕ್ಕೂಟ ಸರ್ಕಾರದ 2021-22 ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತಷ್ಟು ಅನುದಾನಗಳು ಕಡಿತಗೊಳ್ಳುವ ವರದಿಗಳಾಗಿದೆ. ಇದು ಕರ್ನಾಟಕ ಸರ್ಕಾರ ಮತ್ತು ಎಲ್ಲ 28 ಲೋಕಸಭಾ ಸದಸ್ಯರ ಸಾಮೂಹಿಕ ಸೋಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಗುಲಾಮಗಿರಿಗೆ ಒಗ್ಗಿಹೋಗಿರುವ ನಮ್ಮ ಸಂಸದರಿಗೆ, ಜನಪ್ರತಿನಿಧಿಗಳಿಗೆ ಇದು ಅವಮಾನ ಎನ್ನಿಸದಿರಬಹುದು. ಆದರೆ ವಿಶ್ವಾಸವಿಟ್ಟು ಮತ ಚಲಾಯಿಸಿದ ರಾಜ್ಯದ ಜನತೆಯ ಪಾಲಿಗೆ ಇದು ಘೋರ ಅಪಮಾನವಾಗಿದೆ. ಸದ್ಯದಲ್ಲೇ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹೆಚ್ಚು ಹೆಚ್ಚು ಅನುದಾನ ನೀಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಚುನಾವಣೆ ಇದ್ದರೂ, ಇಲ್ಲದೇ ಇದ್ದರೂ ಅನುದಾನ ನೀಡುವುದಿಲ್ಲ. ಕನ್ನಡಿಗರೆಂದರೆ ಅಷ್ಟು ತಾತ್ಸಾರ ಒಕ್ಕೂಟ ಸರ್ಕಾರಕ್ಕೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂನಂಥ ರಾಜ್ಯಗಳಿಗೆ ಪ್ರತ್ಯೇಕವಾಗಿ ಹೆದ್ದಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ಒಕ್ಕೂಟ ಸರ್ಕಾರ ಆಳುವ ಪಕ್ಷದ 25 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿರುವ ಕರ್ನಾಟಕವನ್ನು ಮರೆತಿರುವುದು ಕನ್ನಡಿಗರಿಗೆ ಎಸಗಿದ ದ್ರೋಹ. (3)#Budget2021
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) February 2, 2021
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂನಂಥ ರಾಜ್ಯಗಳಿಗೆ ಪ್ರತ್ಯೇಕವಾಗಿ ಹೆದ್ದಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ಒಕ್ಕೂಟ ಸರ್ಕಾರ ಆಳುವ ಪಕ್ಷದ 25 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿರುವ ಕರ್ನಾಟಕವನ್ನು ಮರೆತಿರುವುದು ಕನ್ನಡಿಗರಿಗೆ ಎಸಗಿದ ದ್ರೋಹ.
ಮೀನುಗಾರಿಕೆ ಕೂಡ ಕರ್ನಾಟಕದ ಒಂದು ಬಹುಮುಖ್ಯವಾದ ಉದ್ಯಮ. ಬಜೆಟ್ ನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ 5 ಮುಖ್ಯವಾದ ಮೀನುಗಾರಿಕೆಯ ಬಂದರುಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಗಿದ್ದು ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಯ 2A ಮತ್ತು 2B ಯೋಜನೆಗಳಿಗೆ ಎಷ್ಟು ಅನುದಾನ ನೀಡಲಾಗುವುದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿಲ್ಲದಿರುವುದು ಎದ್ದುಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್/ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾಮಾನ್ಯ ಜನರು ತೊಂದರೆಗೊಳಗಾಗುತ್ತಿದ್ದಾರೆ. ಪೆಟ್ರೋಲ್/ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಈ ನಿರೀಕ್ಷೆಯನ್ನೂ ಹುಸಿಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಒಕ್ಕೂಟ ಸರ್ಕಾರದ ಬಜೆಟ್, ಕನ್ನಡಿಗರ ಪಾಲಿಗೆ ಖಾಲಿ ಸೊನ್ನೆಯನ್ನು ಸುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಕನ್ನಡಿಗರ ಮತ ಪಡೆಯಬಹುದು, ಅಭಿವೃದ್ಧಿ ಯಾಕೆ ಎಂಬುದು ಅವರ ಆಲೋಚನೆ. ಕನ್ನಡಿಗರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.