ಶಾಲಾ- ಕಾಲೇಜುಗಳು ಮಾರ್ಚ್ನಿಂದಲೇ ಬಂದ್ ಆಗಿವೆ. ಪರೀಕ್ಷೆಗಳನ್ನು ನಡೆಸಿದ್ದು ಬಿಟ್ಟರೆ ಈವರೆಗೆ ದೇಶಾದ್ಯಂತ ಎಲ್ಲಿಯೂ ಶಾಲಾರಂಭಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ, ಇಲ್ಲೊಂದು ಶಾಲೆ ಕಳೆದ ಒಂದು ತಿಂಗಳಿನಿಂದ ತರಗತಿಗಳನ್ನು ನಡೆಸುತ್ತಿದೆ….!
ಕೆಲ ದಿನಗಳ ಹಿಂದೆ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದರೆನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ಅದರ ಜಾಡು ಹಿಡಿದು ಹೋದ ಅಧಿಕಾರಿಗೆ ಅಚ್ಚರಿ ಕಾದಿತ್ತು. ಫೋಟೋದಲ್ಲಿ ಮಕ್ಕಳು ವರಾಂಡಾದಲ್ಲಿ ಕುಳಿತು, ಪುಸ್ತಕಗಳನ್ನು ತೆಗೆದು ಓದುತ್ತಿರುವುದು ಕಂಡು ಬಂದಿದೆ.
ಈ ಫೋಟೋದ ಅಸಲಿಯತ್ತನ್ನು ಪರೀಕ್ಷಿಸಲು ಉತ್ತರಪ್ರದೇಶದ ದೇವರಿಯಾ ಜಿಲ್ಲೆಯ ಶ್ಯಾಮ್ಪುರ್ ಗ್ರಾಮದ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗ್ಯಾನ್ಚಂದ್ ಮಿಶ್ರಾ ತೆರಳಿದ್ದಾರೆ. ಆಗ ಶಾಲಾ ಆವರಣಕ್ಕೆ ಬೀಗ ಹಾಕಿರುವುದು ಕಂಡುಬಂದಿದೆ. ಆದರೆ, ಅನುಮಾನಗೊಂಡ ಅಧಿಕಾರಿ ಕಟ್ಟಡದ ಹಿಂಬದಿಗೆ ತೆರಳಿ ನೋಡಿದಾಗ, ಫೋಟೋದಲ್ಲಿದ್ದ ದೃಶ್ಯ ಕಂಡು ಬಂದಿದೆ.
ಕೂಡಲೇ ಮುಖ್ಯ ಶಿಕ್ಷಕ ಝುಲ್ಫಿಕರ್ ಖಾನ್ ಎಂಬುವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಸ್ಥಳೀಯರನ್ನು ವಿಚಾರಿಸಿದಾಗ ಕಳೆದ ಒಂದು ತಿಂಗಳಿನಿಂದ ಮಕ್ಕಳಿಗೆ ಕಲಿಸಲಾಗುತ್ತಿದೆ. ಮಧ್ಯಾಹ್ನ ಒಂದು ಗಂಟೆವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಸಹ ಶಿಕ್ಷಕ ಹಾಗೂ ಶಿಕ್ಷಕ ಮಿತ್ರ ಹುದ್ದೆಯಲ್ಲಿದ್ದವರು ತರಗತಿಗಳನ್ನು ನಡೆಸುತ್ತಿದ್ದರು. ಮುಖ್ಯ ಶಿಕ್ಷಕರೇ ತರಗತಿಗಳನ್ನು ನಡೆಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಹೀಗಾಗಿ ಮುಖ್ಯ ಶಿಕ್ಷಕರ ಅಮಾನತಿಗೆ ಶಿಫಾರಸು ಮಾಡಲಾಗಿದೆ.
ಆದರೆ, ಗ್ರಾಮದ ಮುಖ್ಯಸ್ಥೆ ಇಸ್ರಾತ್ ಜಹಾನ್ ಪತಿ ಅಫ್ತಾಬ್ ಆಲಂ ಹೇಳುವುದೇ ಬೇರೆ. ಸಮವಸ್ತ್ರ ಹಾಗೂ ಸ್ಕೂಲ್ ಬ್ಯಾಗ್ ಹಂಚಲಾಗುತ್ತಿದೆ ಮಾಹಿತಿ ಸಿಕ್ಕಿದ್ದರಿಂದ ಮಕ್ಕಳು ಶಾಲೆಗೆ ತೆರಳಿದ್ದಾರೆ. ಶಿಕ್ಷಕರ ವಿರುದ್ಧ ತಪ್ಪು ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.