Breaking News

ಹಿರಿಯ ಧುರೀಣ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ನಿಧನ

ಮಂಗಳೂರು : ಶೈಕ್ಷಣಿಕ ಕ್ಷೇತ್ರದ ಅದ್ವಿತೀಯ ಸಾಧಕ, ಹಿರಿಯ ಉದ್ಯಮಿ, ಸಮಾಜ ಸೇವಕ, ಸಮುದಾಯದ ಹಿರಿಯ ನಾಯಕ, ಪ್ರತಿಷ್ಠಿತ ಬಿ.ಎ. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ (89) ಅವರು ರವಿವಾರ ಪೂರ್ವಾಹ್ನ 11.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅಹ್ಮದ್ ಹಾಜಿ ಅವರ ಪಾರ್ಥಿವ ಶರೀರವನ್ನು ಅಪರಾಹ್ನ 3 ಗಂಟೆಗೆ ತುಂಬೆಯಲ್ಲಿರುವ ತುಂಬೆ ಪಿಯು ಕಾಲೇಜಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. 4 ಗಂಟೆಯ ಬಳಿಕ ತುಂಬೆ ಮಸೀದಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮುಹಿಯುದ್ದೀನ್ ಹಾಜಿ ಅವರ ಪರಿಚಯ

1933ರ ಜೂನ್ 18ರಂದು ಮಂಗಳೂರಿನ ಬಂದರಿನಲ್ಲಿ ಅಲ್ಹಾಜ್ ಮುಹಿಯುದ್ದೀನ್ ಚೆಯ್ಯಬ್ಬ ಹಾಗೂ ಮರಿಯಮ್ಮ ಅವರ ಪುತ್ರನಾಗಿ ಜನಿಸಿದ ಅಹ್ಮದ್ ಹಾಜಿ ಮುಹಿಯ್ಯುದ್ದೀನ್ ಮಂಗಳೂರಿನ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮತ್ತು ಗಣಪತಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಹಾಗೂ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದರು.

ಮಂಗಳೂರಿನ ಖ್ಯಾತ ಉದ್ಯಮಿ ಯೆನಪೊಯ ಮೊಯ್ದಿನ್ ಕುಂಞಿ ಅವರ ಹಿರಿಯ ಮಗಳು ಬೀಫಾತಿಮ್ಮ ಅವರನ್ನು ವಿವಾಹವಾದ ಇವರು ತನ್ನ ಮಾವ ಅವರ ವ್ಯವಹಾರದ ಗರಡಿಯಲ್ಲಿ ಪಳಗಿ 1964ರಲ್ಲಿ ಮಂಗಳೂರಿನಿಂದ 20ಕಿ.ಮೀ. ದೂರದ ತುಂಬೆಯಲ್ಲಿ ಮರದ ಉದ್ಯಮವನ್ನು ಸ್ಥಾಪಿಸಿದರು. ಅತ್ಯಂತ ಶ್ರಮವಹಿಸಿ ಟಿಂಬರ್ ಉದ್ಯಮವನ್ನು ಅಭಿವೃದ್ಧಿಪಡಿಸಿ ವ್ಯವಹಾರದ ಒಂದೊಂದೇ ಮೆಟ್ಟಿಲು ಮೇಲೇರಿದರು.

1970 ರಲ್ಲಿ ಮರದ ಮಿಲ್ಲನ್ನು ವಿಸ್ತರಿಸಿದರು. 1975ರಲ್ಲಿ ಫಾತಿಮಾ ಟಿಂಬರ್ಸ್‌, 1978ರಲ್ಲಿ ಹಾಜಿ ಟಿಂಬರ್ಸ್‌ ಕಾಂಪ್ಲೆಕ್ಸ್, 1984ರಲ್ಲಿ ಹಾಜಿ ಟಿಂಬರ್ಸ್‌ ಇಂಡಸ್ಟ್ರೀಸ್, 1986ರಲ್ಲಿ ಮರವನ್ನು ಆಮದು ಮಾಡಿ ಬಿ.ಎ. ಶಿಪ್ಪಿಂಗ್ ಸ್ಥಾಪಿಸಿದರು.

1988ರಲ್ಲಿ ತುಂಬೆಯಲ್ಲಿ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಸ್ಥಾಪಿಸಿ, 1988ರಲ್ಲೇ ತುಂಬೆ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಆರಂಭದಲ್ಲಿ 11 ವಿದ್ಯಾರ್ಥಿಗಳು ಹಾಗೂ ಇಬ್ಬರು ಅಧ್ಯಾಪಕರನ್ನು ಈ ಸಂಸ್ಥೆ ಹೊಂದಿತ್ತು. ಬಳಿಕ ಈ ಸಂಸ್ಥೆಯ ಮೂಲಕ ತುಂಬೆ ಪದವಿ ಪೂರ್ವ ಕಾಲೇಜು, ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ, ತುಂಬೆ ಸೆಂಟ್ರಲ್ ಸ್ಕೂಲ್ ನಡೆಸತೊಡಗಿದರು.

2004ರಲ್ಲಿ ತುಂಬೆಯಲ್ಲಿ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಸ್ಥಾಪಿಸಿದರು. 2009ರಲ್ಲಿ ತುಂಬೆಯಲ್ಲಿ ಬಿ.ಎ.ಆಸ್ಪತ್ರೆಯನ್ನು ಆರಂಭಿಸಿದ್ದು, 2013ರಿಂದ ಇದನ್ನು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯವರು ಇದನ್ನು ಮುನ್ನಡೆಸುತ್ತಿದ್ದಾರೆ.
ಯಶಸ್ವಿ ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ತಾನು ಗಳಿಸಿದ ಸಂಪತ್ತಿನ ಒಂದು ಅಂಶವನ್ನು ಸಮಾಜದ ಉನ್ನತಿಗಾಗಿ ಧಾರೆಯೆರೆದ ಅಹ್ಮದ್ ಹಾಜಿ, ಜಿಲ್ಲೆಯ ಹಲವಾರು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಸಂಸ್ಥಾಪಕರಾಗಿ, ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಅಂದರೆ ಮಂಗಳೂರಿನ ಬಂದರ್ ಕಂದಕ್‌ನ ಬದ್ರಿಯಾ ಶಿಕ್ಷಣ ಸಂಸ್ಥೆ, ಕ್ರೆಸೆಂಟ್ ಶಿಕ್ಷಣ ಸಂಸ್ಥೆ, ನವಭಾರತ್ ರಾತ್ರಿ ಪ್ರೌಢಶಾಲೆ, ಕಸಬಾ ಬೆಂಗರೆಯ ಶಾಲಾಭಿವೃದ್ದಿ ಸಮಿತಿ, ಮಂಗಳೂರು- ಬಂಟ್ವಾಳ – ಪುತ್ತೂರು-ಬೆಳ್ತಂಗಡಿ ತಾಲೂಕು ಸೀರತ್ ಕಮಿಟಿ, ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಮುಸ್ಲಿಂ ಕಮಿಟಿ, ಇಸ್ಲಾಮಿಕ್ ಟ್ರಸ್ಟ್ ಮಂಗಳೂರು, ತುಂಬೆ ಮುಹಿಯುದ್ದೀನ್ ಜುಮಾ ಮಸ್ಜಿದ್, ತುಂಬೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಯೆನಪೊಯ ಮೆಡಿಕಲ್ ಕಾಲೇಜು ಮತ್ತು ಯೆನಪೊಯ ಡೆಂಟಲ್ ಕಾಲೇಜಿನ ಟ್ರಸ್ಟಿಯಾಗಿ, ಬೆಂಗಳೂರಿನ ಅಲ್ ಅಮೀನ್ ಎಜುಕೇಶನ್ ಸೊಸೈಟಿ, ಕನ್ನಡ ಜಾಗೃತ ಸಮಿತಿ, ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಹಾಗೂ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಮಣಿಪಾಲ್ ಇಂಡಸ್ಟ್ರೀಸ್‌ನ ನಿರ್ದೇಶಕರಾಗಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪೋಷಕರಾಗಿ ಸೇವೆ ಸಲ್ಲಿಸಿದ್ದರು.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.